Site icon Vistara News

Leopard Attack: ಕಾರನ್ನೇ ಅಟ್ಟಿಸಿಕೊಂಡು ಬಂದ ಚಿರತೆ; ಭಯಭೀತರಾದ ಯುವಕರು

ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್‌ಗೆ (Isha Foundation) ಹೋಗಿ ವಾಪಸ್ಸಾಗುತಿದ್ದವರ ಕಾರಿನ ಮೇಲೆ‌ ಚಿರತೆ ದಾಳಿ ಮಾಡಿರುವ ಘಟನೆ ತಾಲೂಕಿನ ರೆಡ್ಡಿಗೊಲ್ಲಾರಹಳ್ಳಿ ಶಾಲೆ ಬಳಿ ನಡೆದಿದ್ದು, ಚಿರತೆ ಗರ್ಜನೆಗೆ ಯುವಕರು ಭಯಭೀತರಾಗಿದ್ದಾರೆ.

ಇಶಾ ಫೌಂಡೇಶನ್‌ನಲ್ಲಿ ಆದಿಯೋಗಿ ಪ್ರತಿಮೆ ಹಾಗೂ ಲೇಸರ್ ಶೋ ನೋಡಿಕೊಂಡು ರೆಡ್ಡಿ ಗೊಲ್ಲಾರಹಳ್ಳಿ ಗ್ರಾಮದ ಯುವಕರು ಕಾರಿನಲ್ಲಿ ವಾಪಸ್‌ ಆಗುತ್ತಿದ್ದರು. ಗ್ರಾಮದ ಬಳಿ ಬರುತ್ತಿದ್ದಂತೆ ಕಾರಿನ ಮೇಲೆ ಚಿರತೆ ದಾಳಿ ಮಾಡಿದೆ. ಇದರಿಂದ ಚಾಲಕ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಆದರೂ ಬಿಡದೆ ಚಿರತೆ ಅಟ್ಟಾಡಿಸಿಕೊಂಡು ಬಂದಿದೆ. ಕೆಲ ಹೊತ್ತಿನ ಬಳಿಕ ಚಿರತೆ ಅಲ್ಲಿಂದ ನಿರ್ಗಮಿಸಿದೆ. ಚಿರತೆ ದಾಳಿಯ ದೃಶ್ಯವನ್ನು ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆ ನಿರ್ಗಮಿಸಿದ ಸಮಯಕ್ಕೆ ಗಂಗರೇಕಾಲುವೆ ಗ್ರಾಮದಲ್ಲೂ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಮನೆಗಳಿಂದ ಹೊರಬರಲು ಜನರು ಭಯ ಪಡುತ್ತಿದ್ದಾರೆ.

ಇದನ್ನೂ ಓದಿ | Viral News : ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳು; ಕಾಲುವೆಗೆ ಹಾರಿ ರಕ್ಷಣೆ

ಚಿರತೆ ದಾಳಿಗೆ ಬಾಲಕಿ ಬಲಿ; ತಿರುಮಲ ಮೆಟ್ಟಿಲು ಭಕ್ತರಿಗೆ ಸೇಫ್ ಅಲ್ಲ!

ಕೋಲಾರ: ಆಂಧ್ರ ಪ್ರದೇಶದ ಪ್ರಮುಖ ಪುಣ್ಯಕ್ಷೇತ್ರವಾದ ತಿರುಪತಿಗೆ (Tirupati Temple) ನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಈ ಪೈಕಿ ಬಹುತೇಕರು ಮೆಟ್ಟಿಲು ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಏರಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಇಷ್ಟಪಡುತ್ತಾರೆ. ಆದರೆ, ಈ ಮಾರ್ಗದಲ್ಲಿ ತೆರಳಲು ಈಗ ಭಕ್ತಾದಿಗಳು ಭಯ ಪಡುತ್ತಿದ್ದಾರೆ. ಏಕೆಂದರೆ, ಚಿರತೆ ದಾಳಿಯಿಂದ 6 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಹೀಗಾಗಿ ಯಾವ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡುತ್ತವೋ ಎಂಬ ಭೀತಿಯಲ್ಲೇ ಭಕ್ತರು ತಿರುಪತಿಯ ಬೆಟ್ಟ ಹತ್ತುತ್ತಿರುವುದು ಕಂಡುಬಂದಿದೆ.

ಅಲಿಪಿರಿ ಪಾದಚಾರಿ ಮಾರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಚಿರತೆ ದಾಳಿ ಮಾಡಿ 6 ವರ್ಷದ ಬಾಲಕಿಯನ್ನು ಕೊಂದಿದೆ. ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಬಾಲಕಿ ಹುಡುಕಾಟದ ವೇಳೆ ಶವವಾಗಿ ಪತ್ತೆಯಾಗಿದ್ದಾಳೆ. ನೆಲ್ಲೂರು ಜಿಲ್ಲೆಯ ಲಕ್ಷ್ಮಿತಾ ಮೃತ ಬಾಲಕಿಯಾಗಿದ್ದಾಳೆ. ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಈ ಭಾಗದಲ್ಲಿ ತಿರುಗಾಡುತ್ತಿದೆ ಎಂಬ ಮಾಹಿತಿಯಿದೆ. ಎರಡು ದಿನಗಳ ಹಿಂದೆ ಇಲ್ಲಿ ಮಲಗಿದ್ದ ಕಾರ್ಮಿಕರ ಮೇಲೆಯೂ ಚಿರತೆ ದಾಳಿ ಮಾಡಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಬಾಲಕಿ ಮೇಲೆ ಚಿರತೆ ದಾಳಿ ಮಾಡಿರುವುದರಿಂದ ಭಕ್ತರಲ್ಲಿ ಆತಂಕ ಮೂಡಿದೆ.

ಇದನ್ನೂ ಓದಿ | Road Accident: ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಜೂನ್‌ನಲ್ಲಿ ಬಾಲಕನ ಮೇಲೂ ದಾಳಿಯಾಗಿತ್ತು!

ಈ ಹಿಂದೆ ಸಹ ಇದೇ ರೀತಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ತಿರುಮಲದಲ್ಲಿ ಜೂನ್ 24ರಂದು ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಕರ್ನೂಲು ಜಿಲ್ಲೆಯ ಕೌಶಿಕ್‌(5) ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ, ಕಾಡಿನೊಳಗೆ ಎಳೆದೊಯ್ದಿತ್ತು. ಬಳಿಕ ಅಲ್ಲಿದ್ದ ಜನರು ಕೂಗುತ್ತಿದ್ದಂತೆ ಬಾಲಕನನ್ನು ಚಿರತೆ ಬಿಟ್ಟು ಪರಾರಿಯಾಗಿತ್ತು. ನಂತರ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಚೇತರಿಸಿಕೊಂಡು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.

ಅಲಿಪಿರಿ ಮಾರ್ಗದಲ್ಲಿ ರಾತ್ರಿ 10ರ ನಂತರ ಪ್ರವೇಶವಿಲ್ಲ

ಜೂನ್‌ನಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಂತರ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ರಾತ್ರಿ ವೇಳೆ 7ಗಂಟೆಯಿಂದ ಭಕ್ತರನ್ನು ಒಬ್ಬೊಬ್ಬರನ್ನೇ ಕಳುಹಿಸದೆ, ಒಟ್ಟಿಗೆ 200 ಮಂದಿಯಂತೆ ಒಂದು ತಂಡವಾಗಿ ಕಳುಹಿಸಲಾಗುತ್ತದೆ. ಇವರ ಜತೆಗೆ ಒಬ್ಬ ಸೆಕ್ಯೂರಿಟಿ ಗಾರ್ಡ್‌ ಕೂಡ ಇರುತ್ತಾರೆ. ಇನ್ನು ರಾತ್ರಿ 10ಗಂಟೆವರೆಗೆ ಮಾತ್ರ ಈ ಅಲಿಪಿರಿ ಮಾರ್ಗದಲ್ಲಿ ಭಕ್ತರಿಗೆ ಪ್ರವೇಶವಿರಲಿದೆ. ಇಷ್ಟು ಮುಂಜಾಗ್ರತೆ ಕ್ರಮ ಕೈಗೊಂಡರೂ ಚಿರತೆ ದಾಳಿ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುವುದು ಕಂಡುಬರುತ್ತಿವೆ.

ಇದನ್ನೂ ಓದಿ | Electric Shock : ವಿದ್ಯುತ್‌ ದುರಂತಕ್ಕೆ ಒಂದೇ ಕುಟುಂಬದ ಮೂವರು ಬಲಿ; ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ

ಹೈ ಅಲರ್ಟ್‌ ಜೋನ್‌ ಎಂದು ಘೋಷಣೆ

ಚಿರತೆ ದಾಳಿಯಿಂದ ಬಾಲಕಿ ಸಾವು ಪ್ರಕರಣದಿಂದ ಎಚ್ಚೆತ್ತ ಅರಣ್ಯ ಅಧಿಕಾರಿಗಳು, ತಿರುಪತಿ ಕಾಲ್ನಡಿಗೆ ಮಾರ್ಗದ 7ನೇ ಮೈಲಿಯಿಂದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಹೈ ಅಲರ್ಟ್‌ ಜೋನ್‌ ಆಗಿ ಘೋಷಿಸಿದ್ದು, ಈ ಭಾಗದಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಇನ್ನು ಕಾಲ್ನಡಿಗೆಯಲ್ಲಿ ಬರುವ ಭಕ್ತರು ಒಬ್ಬೊಬ್ಬರೇ ಬಾರದೆ ಗುಂಪು ಗುಂಪಾಗಿ ತೆರಳಬೇಕು ಎಂದು ಸೂಚಿಸಿದ್ದಾರೆ.

Exit mobile version