ಕೋಲಾರ/ಮಂಡ್ಯ/ರಾಯಚೂರು/ದಾವಣಗೆರೆ : ತಿರುಪತಿಗೆ ತೆರಳಿದ್ದ ಬಾಲಕಿಯ ಬಲಿ ಪಡೆದಿದ್ದ ಚಿರತೆಯು ಅಂತೂ (Leopard catch) ಸೆರೆಯಾಗಿದೆ. ಕಳೆದ ಆಗಸ್ಟ್ 11ರಂದು ಅಲಿಪಿರಿ ಪಾದಚಾರಿ ಮಾರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಚಿರತೆ ದಾಳಿ ಮಾಡಿ, 6 ವರ್ಷದ ಬಾಲಕಿಯನ್ನು ಕೊಂದಿತ್ತು. ನೆಲ್ಲೂರು ಜಿಲ್ಲೆಯ ಲಕ್ಷ್ಮಿತಾಳಿಗಾಗಿ ಹುಡುಕಾಟದ ವೇಳೆ ಶವವಾಗಿ ಪತ್ತೆಯಾಗಿದ್ದಳು.
ಆಂಧ್ರ ಪ್ರದೇಶದ ತಿರುಪತಿಗೆ (Tirupati Temple) ನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಈ ಪೈಕಿ ಬಹುತೇಕರು ಮೆಟ್ಟಿಲು ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಏರಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಇಷ್ಟಪಡುತ್ತಾರೆ. ಆದರೆ ಯಾವ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡುತ್ತವೋ ಎಂಬ ಭೀತಿಯಲ್ಲೇ ಭಕ್ತರು ತಿರುಪತಿಯ ಬೆಟ್ಟ ಹತ್ತುತ್ತಿದ್ದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದರು. ಆಗಸ್ಟ್ 14ರಂದು ಚಿರತೆ ಬೋನಿಗೆ ಬಿದ್ದಿದ್ದು, ದೂರದ ಅರಣ್ಯಕ್ಕೆ ರವಾನಿಸಿದ್ದಾರೆ.
ಕಾರ್ಯಾಚರಣೆ ವೇಳೆ ಇನ್ನೂ ಮೂರು ಚಿರತೆಗಳು ಇರುವುದು ಪತ್ತೆ ಆಗಿದೆ. ಶ್ರೀವಾರು ಮೆಟ್ಟಿಲು ಬಳಿ ಮತ್ತೆ ಮೂರು ಚಿರತೆ ಓಡಾಟವು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಹೀಗಾಗಿ ಭಕ್ತಾದಿಗಳು ಜಾಗೃತರಾಗಿರಲು ಹಾಗೂ ಭಕ್ತರು ಗುಂಪು ಗುಂಪಾಗಿ ಬರುವಂತೆ ಟಿಟಿಡಿ ಇಒ ಧರ್ಮಾರೆಡ್ಡಿ ತಿಳಿಸಿದ್ದಾರೆ.
ಚಿರತೆ ಸೆರೆಗಾಗಿ ಬೋನಿಗೆ ನಾಯಿ ಬಿಟ್ಟ ಅಧಿಕಾರಿಗಳು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿರತೆ ಭೀತಿ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿದೆ. ಕಳೆದ ಕೆಲ ದಿನಗಳಿಂದ ಗ್ರಾಮದ ಅಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆ ಬಳಿಕ ಕುಪ್ಪಳ್ಳಿ ಗ್ರಾಮದ ಪಂಪ್‌ಸೆಟ್ ಮನೆಯಲ್ಲಿ ಚಿರತೆ ಓಡಾಡಿತ್ತು. ಈಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲೂ ಚಿರತೆ ಕಾಣಿಸಿಕೊಂಡಿದೆ. ಹಿಂದೊಮ್ಮೆ ಚಿರತೆಯು ಮಹಿಳೆಯನ್ನು ಎಳೆದುಹೋಗಿ ಕೊಂದು ಹಾಕಿತ್ತು. ಈಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಫಲವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೊರಗೆ ಓಡಾಡಲು ಭಯಗೊಂಡಿದ್ದಾರೆ.
ಇನ್ನು ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದಾರೆ. ಆರ್‌ಎಫ್‌ಓ ಚೇತನ್ ನೇತೃತ್ವದ ತಂಡದಿಂದ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಬ್ಬೊಬ್ಬರೇ ಜಮೀನುಗಳಿಗೆ ಹೋಗದಂತೆ ಹಾಗೂ ಚಿರತೆ ಚಲನವಲನ ಕಂಡು ಬಂದರೆ ಅರಣ್ಯ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಬೋನಿನಲ್ಲಿ ನಾಯಿ ಬಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.
ಕುರಿಗಳು, ನಾಯಿ ನಾಪತ್ತೆ
ರಾಯಚೂರಿನ ನೀರಮಾನ್ವಿ ಬಳಿಯ ಬೆಟ್ಟದೂರು ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಳೆದ 15 ದಿನಗಳಲ್ಲಿ ಕುರಿಗಾಯಿಗಳ 10 ನಾಯಿ, ಕುರಿಗಳು ನಾಪತ್ತೆ ಆಗಿವೆ. ಗ್ರಾಮದ ಸಿದ್ದರೂಡಮಠದ ಹತ್ತಿರವೂ ಚಿರತೆ ಪತ್ತೆ ಆಗಿದೆ. ಗುಡ್ಡದ ಮೇಲಿನ ಭಗಧ್ವಜದ ಹತ್ತಿರ ಸಂಜೆ ವೇಳೆ ಚಿರತೆ ಓಡಾಡುತ್ತಿದೆ. ಜಮೀನುಗಳಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು, ರೈತರು ಒಬ್ಬರೇ ಓಡಾಡಲು ಹೆದರುವಂತಾಗಿದೆ.
ಇತ್ತ ಚಿರತೆ ಭಯಕ್ಕೆ ಬೆಟ್ಟದಲ್ಲಿದ್ದ ಕೋತಿಗಳು ಗ್ರಾಮಕ್ಕೆ ನುಗ್ಗಿವೆ. ಕಳೆದ ವರ್ಷವೂ ನಾಲ್ಕು ಚಿರತೆಗಳು ಜನರಲ್ಲಿ ಭಯ ಹುಟ್ಟಿಸಿದ್ದವು. ನಾಲ್ಕು ಚಿರತೆಗಳಲ್ಲಿ ಚಿರತೆ ಜತೆಗೆ ಮರಿಯೊಂದು ಬಲೆಗೆ ಬಿದ್ದಿತ್ತು. ಇನ್ನೆರಡು ಚಿರತೆಗಳು ನಾಪತ್ತೆಯಾಗಿದ್ದವು. ಈಗ ಪುನಃ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ