Site icon Vistara News

Leopard death | ಮರ ಎಂದು ಭ್ರಮಿಸಿ ಟ್ರಾನ್ಸ್‌ಫಾರ್ಮರ್‌ ಮೇಲೆ ಹತ್ತಿದ ಚಿರತೆ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸಾವು!

leopard in transformer

ತುಮಕೂರು: ರಾಜ್ಯದೆಲ್ಲೆಡ ಚಿರತೆ ದಾಳಿಯದ್ದೇ ಸುದ್ದಿ. ಹಳ್ಳಿ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳೂ ಚಿರತೆ ದಾಳಿಯಿಂದ ನಲುಗಿವೆ. ಕುರುಚಲು ಕಾಡುಗಳಲ್ಲಿ ವಾಸಿರುವ ಈ ಪ್ರಾಣಿಗಳು ಈಗ ನಾನಾ ಕಾರಣಕ್ಕೆ ಜನವಸತಿ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿವೆ. ಹೀಗಾಗಿ ದನ, ನಾಯಿಗಳನ್ನು ಹೊತ್ತೊಯ್ಯುವ, ಮನುಷ್ಯರ ಪ್ರಾಣವನ್ನೇ ತೆಗೆಯುವ (Leopard death) ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ.

ಟ್ರಾನ್ಸ್‌ಫಾರ್ಮರ್‌ನಲ್ಲಿ ಸಿಲುಕಿದ ಚಿರತೆ

ಇದರ ನಡುವೆ ಇಲ್ಲೊಂದು ಚಿರತೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದೆ. ಅಂದ ಹಾಗೆ ಇದು ಒಂದು ಚಿರತೆಯ ಸಾವಿನ ಸುದ್ದಿ. ಹಾಗಂತ ಇದನ್ನು ಯಾರೋ ಕೊಂದು ಹಾಕಿದ್ದಲ್ಲ. ಬದಲಾಗಿ, ಅದು ತಾನೇ ವಿದ್ಯುತ್‌ ಆಘಾತದ ಬಲೆಗೆ ಬಿದ್ದಿದೆ. ಅದೂ ಕೂಡಾ ದೊಡ್ಡ ಸಾಹಸ ಮಾಡಲು ಹೋಗಿ!

ಹೌದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕರೇಗೌಡನಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ವಿಚಿತ್ರ ರೀತಿಯಲ್ಲಿ ಜೀವ ಕಳೆದುಕೊಂಡಿದೆ. ಮಂಗಳವಾರ ಮಧ್ಯಾಹ್ನದ ಹೊತ್ತು ಇಲ್ಲಿನ ಒಂದು ಟ್ರಾನ್ಸ್‌ಫಾರ್ಮರ್‌ನಲ್ಲಿ ಏನೋ ಗಂಟು ಸಿಕ್ಕಿಹಾಕಿಕೊಂಡಂತೆ ಕಂಡಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅದೊಂದು ಚಿರತೆ ಎಂದು ತಿಳಿಯಿತು. ಕೂಡಲೇ ಊರಿನ ಜತೆ ಸೇರಿದ್ದರು.

ಈ ಚಿರತೆ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವಾಗ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಇದೇವೇಳೆ ಅದು ಮರ ಎಂದು ತಿಳಿದು ಟ್ರಾನ್ಸ್‌ಫಾರ್ಮರ್‌ನ್ನು ಹತ್ತಿ ವಿದ್ಯುತ್‌ ಆಘಾತಕ್ಕೆ ಒಳಗಾಯಿತೇ ಎನ್ನುವ ಸಂಶಯವೂ ಇದೆ.

ಅಂತೂ ಟ್ರಾನ್ಸ್‌ಫಾರ್ಮರ್‌ನ ಮೇಲೆ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಚಿರತೆಯ ಶವ ಇರುವುದಂತೂ ಸತ್ಯ. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ಮೃತದೇಹವನ್ನು ಕೆಳಗಿಳಿಸಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ | Leopard attack | ಕಾಮೇನಹಳ್ಳಿಯಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು, ಜನ ನಿಟ್ಟುಸಿರು

Exit mobile version