ರಾಮನಗರ: ಇಲ್ಲಿನ ಬಿಳಗುಂಬ ಬಳಿಯ ಬೆಂಗಳೂರು-ಮೈಸೂರು ಬೈಪಾಸ್‌ನ ಶಿವಗಿರಿ ಬೆಟ್ಟದಲ್ಲಿ ರಸ್ತೆ ದಾಟಲು ಹೋದ ಚಿರತೆಗೆ (Leopard Death) ವಾಹನವೊಂದು ಡಿಕ್ಕಿ ಹೊಡೆದಿದೆ.
ತಡರಾತ್ರಿ ಘಟನೆ ನಡೆದಿದ್ದು, ವಾಹನ ಡಿಕ್ಕಿ ಹೊಡದ ರಭಸಕ್ಕೆ ತೀವ್ರ ಗಾಯಗೊಂಡ ಚಿರತೆ ಸ್ಥಳದಲ್ಲಿ ಮೃತಪಟ್ಟಿದೆ. ಸಾವಿಗೀಡಾದ ಚಿರತೆ ಕಂಡು ಜನರು ಮರುಕ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕು ಅಥವಾ ರಾತ್ರಿ ಸಮಯದಲ್ಲಿ ವೇಗದ ಮಿತಿಯನ್ನು ಅಳವಡಿಸಿಬೇಕೆಂದು ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಂಕ್ರೀಟ್ ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳು
ಇತ್ತೀಚೆಗೆ ಕಾಡು ಬಿಟ್ಟು ಕಾಂಕ್ರೀಟ್ ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅಕ್ಟೋಬರ್ 25ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಮುದಗಾನಕುಂಟೆ ಕ್ರಾಸ್ ಬಳಿ ರಸ್ತೆ ದಾಟಲು ಹೋಗಿದ್ದ ಚಿರತೆಯೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಚಿರತೆ ಸ್ಥಳದಲ್ಲಿಯೇ ಮೃತಪಟ್ಟಿತ್ತು.
ಮತ್ತೊಂದು ಕಡೆ ಕೊಡಗಿನ ಕುಶಾಲನಗರ ತಾಲೂಕಿನ ರಸೂಲ್‌ಪುರದಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಜಿಂಕೆಯೊಂದು (Deer Death) ಮೃತಪಟ್ಟಿತ್ತು. ಅರಣ್ಯದಿಂದ ರಸ್ತೆಗೆ ಬಂದ ಜಿಂಕೆಯೊಂದು ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿತ್ತು. ಅಪಘಾತದ ಬಳಿಕ ಗಾಯಗೊಂಡ ಜಿಂಕೆ ಎದ್ದು ಸಾವರಿಸಿಕೊಂಡು ಹೋಗಿತ್ತಾದರೂ ಸ್ವಲ್ಪ ದೂರ ಕ್ರಮಿಸಲುತ್ತಲೇ ಬಿದ್ದು ಮೃತಪಟ್ಟಿತ್ತು.
ಇದನ್ನೂ ಓದಿ | Puneeth Parva | ಕಾಡು ಪ್ರಾಣಿ, ಗಿಡ-ಮರಗಳಲ್ಲೂ ಅಪ್ಪುವನ್ನು ನೋಡೋಣ: ರಾಘವೇಂದ್ರ ರಾಜಕುಮಾರ್