Site icon Vistara News

ಅಂಜನಾದ್ರಿ ದೇವಸ್ಥಾನ ಬಳಿ ಚಿರತೆ, ಸಂಜೆ ಬಳಿಕ ಬೆಟ್ಟ ಹತ್ತುವಂತಿಲ್ಲ, 3 ಗಂಟೆಗೇ ದರ್ಶನ ಬಂದ್

Anjanadri

ಕೊಪ್ಪಳ: ಕೊಪ್ಪಳದ ನಾನಾ ಕಡೆ ಜನವಸತಿ ಪ್ರದೇಶಗಳಲ್ಲಿ ಚಿರತೆ ದರ್ಶನವಾಗುತ್ತಿದೆ. ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲೂ ಚಿರತೆ ಕಾಣಿಸಿಕೊಂಡಿರುವುದರಿಂದ ದೇವರ ದರ್ಶನದ ಸಮಯವನ್ನೇ ಬದಲಾಯಿಸಲಾಗಿದೆ. ಇನ್ನು ಮುಂದೆ ಸಂಜೆ ಮೂರು ಗಂಟೆಯ ನಂತರ ಅಂಜನಾದ್ರಿ ದೇವಾಲಯದಲ್ಲಿ ದರ್ಶನ ಇರುವುದಿಲ್ಲ.

ಹನುಮನ ಜನ್ಮಸ್ಥಳವಾಗಿ ಲೋಕಾಂತರ ಪ್ರಸಿದ್ಧಿ ಹೊಂದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಕ್ಷೇತ್ರ ಅಂಜನಾದ್ರಿಯಲ್ಲಿ ಜನರು ಓಡಾಡುವ ಪ್ರದೇಶದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡಿದೆ. ಆಗಸ್ಟ್‌ ೯ ಮತ್ತು ೧೨ರಂದು ಎರಡು ಬಾರಿ ಇಲ್ಲಿನ ದೇವಸ್ಥಾನದ ಸಿಬ್ಬಂದಿಯ ಮನೆಗಳಿರುವ ಪಾದಗಟ್ಟೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಮನೆಯೊಂದರ ಮುಂದಿನ ಕಲ್ಲುಬಂಡೆಯ ಮೇಲೆ ಬಂದು ಕುಳಿತಿರುವ ಅದು ಮಿಕಕ್ಕಾಗಿ ಕಾಯುತ್ತಿರುವಂತೆ ಕಾಣುತ್ತಿದೆ.

ಹಗಲು ಹೊತ್ತಿನಲ್ಲಿ ಈ ಭಾಗದಲ್ಲಿ ಸಾಕಷ್ಟು ಜನ ಸಂಚಾರವಿರುತ್ತದೆ. ಇಲ್ಲೇ ಅಕ್ಕಪಕ್ಕ ಸಾಕಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ನೂರಾರು ಮಂದಿ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುತ್ತಾರೆ. ಹೀಗಾಗಿ ಭಕ್ತರಿಗೆ ಅಪಾಯವಾಗಬಹುದು ಎಂಬ ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದರ್ಶನದ ಸಮಯವನ್ನು ಸೀಮಿತಗೊಳಿಸಿದೆ.

ಮೂರು ಗಂಟೆಗೇ ಬಂದ್‌
ಆಗಸ್ಟ್‌ ೨೬ರಂದು ಬಿಡುಗಡೆ ಮಾಡಿದ ಸುತ್ತೋಲೆ ಪ್ರಕಾರ, ಅಂಜನಾದ್ರಿಯಲ್ಲಿ ಇನ್ನು ಮುಂದೆ ಬೆಳಗ್ಗೆ ೮ರಿಂದ ಮಧ್ಯಾಹ್ನ ೩ ಗಂಟೆವರೆಗೆ ಮಾತ್ರ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶವಿರುತ್ತದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಆನೆಗುಂದಿ ಗ್ರಾಮದ ಅಂಜನಾದ್ರಿ ಬೆಟ್ಟ/ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಲಿನ ಪ್ರದೇಶವು ಸೆಕ್ಷನ್‌-೪ ಅಧಿಸೂಚಿತ ಅರಣ್ಯ ಪ್ರದೇಶದ ಅಡಿಯಲ್ಲಿ ಬರುತ್ತಿದೆ. ಈ ಪ್ರದೇಶವು ಕಲ್ಲುಬಂಡೆಗಳಿಂದ ಆವೃತವಾದ ನೈಸರ್ಗಿಕ ಅರಣ್ಯ ಪ್ರದೇಶವಾಗಿರುತ್ತದೆ. ಇಲ್ಲಿ ಚಿರತೆ ಮತ್ತು ಕರಡಿಗಳು ವಾಸಿಸುತ್ತವೆ. ದೇವಸ್ಥಾನದ ಕಚೇರಿ ಬಳಿಯೇ ಚಿರತೆ ಓಡಾಡಿರುವುದು ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಬೆಟ್ಟದ ಮೇಲೆ, ಪೊದೆಗಳ ಬಳಿ ಕೆಲವರು ಫೋಟೊ ಕ್ಲಿಕ್ಕಿಸಿಕೊಳ್ಳುವ ಆಸಕ್ತಿ ತೋರಿಸುತ್ತಿದ್ದು, ಇಂಥ ಸಂದರ್ಭದಲ್ಲಿ ಚಿರತೆ ದಾಳಿ ನಡೆಯುವ ಅಪಾಯವಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಲವು ಕಡೆ ಚಿರತೆ ಪ್ರತ್ಯಕ್ಷ
ಗಂಗಾವತಿಯ ಜಯನಗರದ ಗುಡ್ಡ ಪ್ರದೇಶದಲ್ಲಿ ಇತ್ತೀಚೆಗೆ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಈ ಸಂಬಂಧ ರೈತ ಜೋಗದ ನಾರಾಯಣಪ್ಪ ಅವರ ತೋಟದ ಮನೆ ಹಿಂದೆ ಬೋನು ಇಡಲಾಗಿತ್ತು. ಇದರಲ್ಲಿ ಒಂದು ಚಿರತೆ ಬಿದ್ದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಬಳಿ ಗ್ರಾನೈಟ್‌ ಕ್ವಾರಿಯಲ್ಲೂ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಈ ಚಿರತೆಯನ್ನೂ ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು.
ಅದಕ್ಕಿಂತ ಮೊದಲು ಕೊಪ್ಪಳ ತಾಲೂಕಿನ ಮುನಿರಾಬಾದ್‌ ಜಲಾಶಯದ ಬಳಿ ಚಿರತೆ ಕಂಡು ಜನ ಬೆಚ್ಚಿಬಿದ್ದಿದ್ದರು.

ಇದನ್ನೂ ಓದಿ | Operation Leopard | ಗಾವರಾಳದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ

Exit mobile version