Site icon Vistara News

Leopard trapped | 15 ದಿನದ ಹಿಂದೆ 3 ಹಸುಗಳನ್ನು ಬೇಟೆಯಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು, ನೋಡಲು ಜನಸಾಗರ

ಚಿರತೆ ಬೋನಿಗೆ ಬಿತ್ತು
ಶಿವಮೊಗ್ಗದಲ್ಲಿ ಸೆರೆ ಸಿಕ್ಕ ಚಿರತೆ

ಶಿವಮೊಗ್ಗ: ರಾಜ್ಯಾದ್ಯಂತ ಚಿರತೆಗಳ ದಾಳಿ ವಿಪರೀತವಾಗಿದ್ದು, ಜನರು ಭಯದಲ್ಲೇ ಬದುಕು ಕಳೆಯುವಂತಾಗಿದೆ. ಮೈಸೂರಿನ ತಿ. ನರಸೀಪುರದಲ್ಲಿ ಗುರುವಾರ ರಾತ್ರಿ ಒಬ್ಬ ಯುವತಿಯನ್ನು ಅದು ಬಲಿ ಪಡೆದಿದೆ. ಬೆಂಗಳೂರಿನಲ್ಲೂ ಸುಮಾರು ಏಳು ಚಿರತೆಗಳು ಒಂದು ಕೈಗಾರಿಕಾ ಪ್ರದೇಶವನ್ನು ಆಕ್ರಮಿಸಿಕೊಂಡು ಕುಳಿತಿವೆ. ಚಿರತೆಗಳ ಭಯದಿಂದ ಮೈಸೂರಿನ ಬಹು ಜನಪ್ರಿಯ ಕೆಆರ್‌ಎಸ್‌ ಬೃಂದಾವನ ಪ್ರದೇಶವನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರುವ ನಡುವೆ ಶಿವಮೊಗ್ಗದ ಹರಮಘಟ್ಟ ಗ್ರಾಮದಲ್ಲಿ ಚಿರತೆಯೊಂದನ್ನು ಬಹು ಕಷ್ಟಪಟ್ಟು ಸೆರೆ ಹಿಡಿಯಲಾಗಿದೆ (Leopard trapped) ಈ ಚಿರತೆ ಕಳೆದ ಕೆಲವು ವಾರಗಳಿಂದ ಭಾರಿ ಆತಂಕವನ್ನು ಸೃಷ್ಟಿ ಮಾಡಿತ್ತು. 15 ದಿನಗಳ ಹಿಂದೆ 3 ಹಸುಗಳನ್ನು ಬೇಟೆಯಾಡಿದ್ದ ಚಿರತೆಯ ಭಯದಿಂದ ಜನರು ಮನೆಯಿಂದ ಹೊರಬರಲೂ ಕಷ್ಟಪಡುತ್ತಿದ್ದರು.

ಗ್ರಾಮಸ್ಥರು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಹರಮಘಟ್ಟದ 200 ಮೀಟರ್ ವ್ಯಾಪ್ತಿಯಲ್ಲಿ ಬೋನು ಇಟ್ಟು ಇಲಾಖೆ ಸೆರೆಗೆ ಪ್ರಯತ್ನ ಮಾಡಿತ್ತು. ಶುಕ್ರವಾರ ಬೆಳಗ್ಗೆ ಕೊನೆಗೂ ಗಂಡು ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಚಿರತೆ ಬೋನಿಗೆ ಬಿದ್ದಿದೆ ಎಂದು ತಿಳಿಯುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಡುವ ನಿರೀಕ್ಷೆ ಇದೆ.

ಇದನ್ನೂ ಓದಿ | Leopard attack | ಚಿರತೆ ದಾಳಿಗೆ ಬಲಿಯಾದ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ, ಪ್ರತಿಭಟನೆ ಅಂತ್ಯ

Exit mobile version