ಮೈಸೂರು: ಈಗ ಎಲ್ಲಿ ಕೇಳಿದರಲ್ಲಿ ಚಿರತೆಗಳದ್ದೇ ಸುದ್ದಿ. ಅಲ್ಲಿ ಬಂತು, ಇಲ್ಲಿ ಬಂತು, ಅಲ್ಲಿ ದನ ಹೊತ್ತುಕೊಂಡು ಹೋಯಿತು, ನಾಯಿಯನ್ನು ಎಳೆದೊಯ್ದಿತು, ಅಂಗಳದಲ್ಲೇ ಇದ್ದವರ ಮೇಲೆ ದಾಳಿ ಮಾಡಿತು, ದಾರಿ ನಡೆಯೋರನ್ನು ಕೊಂದೇ ಹಾಕಿತು ಅನ್ನೋ ಸುದ್ದಿ ಕೇಳುತ್ತಲೇ ಇರುತ್ತೇವೆ. ಅದರಲ್ಲೂ ಚಿರತೆಗಳನ್ನು ಕಂಡರೆ ನಾಯಿ, ಗೋವುಗಳು ಭಯಗೊಂಡು ನಡುಗುತ್ತವೆ.
ಆದರೆ, ಇಲ್ಲೊಂದು ದೃಶ್ಯ ಬೇರೆಯೇ ಇದೆ. ಇಲ್ಲಿ ಎರಡು ಚಿರತೆಗಳಿವೆ. ಒಂದು ಆಕಳ ಕರುವಿದೆ. ಚಿರತೆಗಳು ಮುದುಡಿ ಮಲಗಿದ್ದರೆ ಆಕಳ ಕರು ಮಾತ್ರ ಹೀರೋನಂತೆ ಗತ್ತಿನಲ್ಲಿ ನಿಂತಿದೆ. ಇಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಆಕಳ ಕರು ಒಂದು ಹೆಜ್ಜೆ ಮುಂದಿಟ್ಟು ಮುಖವನ್ನು ಅಲ್ಲಾಡಿಸಿದರೆ ಸಾಕು ಈ ಚಿರತೆಗಳು ಹೆದರಿ ಗಡಗಡ ನಡುಗುತ್ತವೆ. ಇನ್ನಷ್ಟು ಮುದುರಿಕೊಂಡು ಮಲಗುತ್ತವೆ! ಏನಿದು ವಿಚಿತ್ರ? ಚಿರತೆಗಳಿಗೆ ಏನಾಯ್ತು? ಆಕಳ ಕರುವಿಗೆ ಅಷ್ಟೊಂದು ಶಕ್ತಿ ಬಂದಿದ್ದು ಎಲ್ಲಿಂದ ಅಂತೀರಾ?
ಈ ದೃಶ್ಯ ಕಂಡುಬಂದಿದ್ದು ಮುಸುವಿನಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ. ಈ ಭಾಗದಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿಯಲೆಂದು ಬೋನನ್ನು ಇಡಲಾಗಿತ್ತು. ಚಿರತೆಗಳು ಬಂದರೆ ಆಹಾರದ ಆಕರ್ಷಣೆ ಇರಬೇಕಲ್ಲ.. ಅದಕ್ಕಾಗಿ ಒಂದು ಬಡ ಆಕಳ ಕರುವನ್ನು ಬೋನಿನೊಳಗೆ ಇಡಲಾಗಿತ್ತು. ಗುರುವಾರ ರಾತ್ರಿ ಚಿರತೆಗಳು ಎಂದಿನಂತೆ ರಾಜಾರೋಷವಾಗಿ ನಡೆದುಕೊಂಡು ಬಂದಾಗ ಆಕಳ ಕರು ಕಾಣಿಸಿಕೊಂಡಿರಬೇಕು.
ಅವುಗಳು ಆಕಳ ಕರು ಸಿಕ್ಕಿದ ಖುಷಿಯಲ್ಲಿ ಒಳಗೆ ನುಗ್ಗಿಬಿಟ್ಟಿವೆ. ಎರಡು ಚಿರತೆಗಳು ಒಳಗೆ ಹೋಗಿ ಇನ್ನೇನು ಆಕಳ ಕರುವನ್ನು ತಿಂದು ತೇಗಬೇಕು ಎನ್ನುವಾಗ ಅಲ್ಲಿ ಬೋನಿನ ಲಾಕ್ ಬಿದ್ದಿರಬೇಕು. ಅಷ್ಟು ಹೊತ್ತಿಗೆ ತಾವು ಲಾಕ್ ಆಗಿರುವ ಸಂಗತಿ ಈ ಚಿರತೆಗಳಿಗೆ ಗೊತ್ತಾಗಿರಬೇಕು! ಅಷ್ಟೂ ಹೊತ್ತು ಭಯಂಕರ ಸ್ಟೈಲ್‌ನಲ್ಲಿ, ರಾಜ ಗಾಂಭೀರ್ಯದಿಂದ, ದಾಳಿ ಮಾಡುವ ಪವರ್‌ನೊಂದಿಗೆ ಮಿಂಚುತ್ತಿದ್ದ ಚಿರತೆಗಳು ಪವರ್ ಕಳೆದುಕೊಂಡವು. ಅಷ್ಟೇ ಅಲ್ಲ, ಎದುರಿಗೆ ತಮ್ಮ ಆಹಾರವಿದೆ, ಹೇಗೆ ಬೇಕಾದರೂ ತಿಂದು ಖುಷಿಪಡಬಹುದಾದ ಸ್ಥಿತಿ ಇದ್ದರೂ ತಿನ್ನಲೂ ಆಗದೆ ಕಂಗಾಲಾಗಿ ಹೋದವು.
ಪರಿಸ್ಥಿತಿ ಎಲ್ಲಿವರೆಗೆ ಬಂತೆಂದರೆ ಒಮ್ಮೆ ಇಲ್ಲಿಂದ ತಪ್ಪಿಸಿಕೊಂಡರೆ ಸಾಕು ಎಂದು ಭಾವಿಸಿದ ಚಿರತೆಗಳು ಆಕಳ ಮುಂದೆ ಮಂಡಿಯೂರಿದಂತೆ ಮಲಗಿದ ಚಿತ್ರ ಅಲ್ಲಿತ್ತು! ಈ ನಡುವೆ, ಚಿರತೆಗಳು ಒಮ್ಮಿಂದೊಮ್ಮೆಗೇ ನುಗ್ಗಿ ಬಂದಾಗ ಭಯದಿಂದ ನಡುಗಿದ ಆಕಳ ಕರು ಮಾತ್ರ, ಕೆಲವೇ ಹೊತ್ತಿನಲ್ಲಿ ಸುಧಾರಿಸಿಕೊಂಡು ಎದ್ದು ನಿಂತಿದೆ.
ಈ ಆಕಳ ಕರುವಿನ ಧಿಮಾಕು ಹೇಗಿದೆ ಎಂದರೆ ಎರಡು ಬಲಿಷ್ಠ ಪ್ರಾಣಿಗಳು ಎದುರಿಗೆ ಇದ್ದರೂ ಈ ಕರು ಮಾತ್ರ ಎದ್ದು ನಿಂತು ಹೆಂಗೆ ಎಂಬಂತೆ ನೋಟ ಬೀರುತ್ತದೆ! ಮಾತ್ರವಲ್ಲ ಆಗಾಗ ಒಂದು ಹೆಜ್ಜೆ ಮುಂದಿಟ್ಟು ಕತ್ತು ಅಲ್ಲಾಡಿಸುತ್ತದೆ. ಆದರೆ ಈ ಸಣ್ಣ ಚಲನೆಗೇ ಚಿರತೆಗಳು ಬೆದರಿ ನಡುಗುತ್ತವೆ!
ಕರು ತಿನ್ನಲು ಬಂದ ಚಿರತೆಗಳೇ ಬಂದಿಯಾದ ಕಥೆ ಇದು!
ಇಲ್ಲಿನ ಮುಸುವಿನಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಶುಕ್ರವಾರ (ಫೆ.10) ಮುಂಜಾನೆ ಎರಡು ಚಿರತೆಗಳು ಬಿದ್ದಿರುವುದನ್ನು ಕೇಳಿ ಊರಿನವರೆಲ್ಲ ಓಡೋಡಿ ಬಂದರು. ಪಾಪ ಚಿರತೆಗಳು ಕರುವನ್ನು ತಿಂದಿರಬಹುದು ಎಂದು ಭಾವಿಸಿ ಪಶ್ಚಾತ್ತಾಪದಿಂದ ಬರುತ್ತಿದ್ದ ಜನರಿಗೆ ಅಚ್ಚರಿ ಕಾದಿತ್ತು. ಆಕಳ ಕರು ಎದ್ದು ನಿಂತು ಖುಷಿಯಲ್ಲಿದ್ದರೆ ಚಿರತೆಗಳು ಅದರ ಕಾಲ ಬುಡದಲ್ಲಿ ಮಲಗಿದ್ದಂತೆ ಕಂಡಿತು!
ಅರೆರೆ ಇದೇನಚ್ಚರಿ ಎಂದು ಮೂಗಿನ ಮೇಲೆ ಬೆರಳಿಟ್ಟ ಗ್ರಾಮಸ್ಥರು ವಿಚಿತ್ರ ಘಟನೆಯನ್ನು ಮೊಬೈಲ್ ಮೂಲಕ ಸೆರೆ ಹಿಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆಗಳನ್ನು ಜಮೀನಿನಿಂದ ಸ್ಥಳಾಂತರ ಮಾಡಿದರು.
ದೊಡ್ಡಬಳ್ಳಾಪುರದಲ್ಲೂ ಚಿರತೆಗಳು ಪ್ರತ್ಯಕ್ಷ
ನಾಡಿನ ಕಡೆಗೆ ಕಾಡು ಪ್ರಾಣಿಗಳು ಲಗ್ಗೆಹಿಡುತ್ತಿದ್ದು ಜನರು ಭಯಭೀತಿಗೊಂಡಿದ್ದಾರೆ. ಕಾಡಾನೆ, ಹುಲಿ, ಚಿರತೆ, ಕರಡಿ ಹೀಗೆ ಹಲವು ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗೆ ಕಾಣಿಸಿಕೊಳ್ಳುತ್ತಿರುವ ಕಾಡುಪ್ರಾಣಿಗಳು, ಸಾಕು ಪ್ರಾಣಿ ಹಾಗೂ ಜನರ ಮೇಲೆ ದಾಳಿ ನಡೆಸಿ ಸಾವು ನೋವಿಗೆ ಕಾರಣವಾಗುತ್ತಿದೆ.
ಇದನ್ನೂ ಓದಿ: Alcoholic woman : ಕುಡಿತದ ಮತ್ತಿನಲ್ಲಿ ಮಹಿಳೆ ರಂಪಾಟ, ಪುಟ್ಟ ಮಗುವನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ಕುಡುಕಿ ತಾಯಿ
ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಕೆರೆ ಬಳಿ ಮಣ್ಣು ತೆಗೆಯುವಾಗ ಚಿರತೆಗಳು ಪ್ರತ್ಯಕ್ಷವಾಗಿವೆ. ಕೆರೆಯಲ್ಲಿ ಜೆಸಿಬಿ ಮೂಲಕ ಮಣ್ಣು ತುಂಬುವಾಗ ಚಿರತೆಗಳ ಚಲನವಲನವನ್ನು ಜೆಸಿಬಿ ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಕಳೆದ 20 ದಿನಗಳಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಇಲಾಖೆ ಬೋನ್ ಅಳವಡಿಸಿದೆ. ಆದರೂ ಬೋನಿಗೆ ಬೀಳದ ಚಿರತೆ ತಪ್ಪಿಸಿಕೊಳ್ಳುತ್ತಿದೆ.