Site icon Vistara News

ಹಸಿರು ನಮ್ಮ ಉಸಿರಾಗಲಿ, ಪರಿಸರ ಕಾಳಜಿ ನಿತ್ಯೋತ್ಸವವಾಗಲಿ: ಹರಿಪ್ರಕಾಶ್ ಕೋಣೆಮನೆ

Suttur mutt shree and Hariprakash konemane in Plant distribution programme in mysore

#image_title

ಮೈಸೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ (World Environment Day) ʼಹಸಿರು ಮೈಸೂರು-ಲಕ್ಷ ವೃಕ್ಷʼ ಆಂದೋಲನದ ಭಾಗವಾಗಿ ಮೈಸೂರು-ನಂಜನಗೂಡು ಹೆದ್ದಾರಿಯ ನರ್ಸರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 15,000 ಗಿಡ ವಿತರಣೆ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಚಾಲನೆ ನೀಡಿದರು.

ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ, ಪರಿಸರ ದಿನವನ್ನು ವರ್ಷಕ್ಕೆ ಒಮ್ಮೆ ಆಚರಣೆ ಮಾಡುವುದಲ್ಲ. ನದಿ, ಜಲ ಮೂಲ ಇಲ್ಲದಿದ್ದರೆ ಕುಡಿಯಲು ಹನಿ ನೀರೂ ಸಿಗುವುದಿಲ್ಲ. ಪರಿಸರ ನಮ್ಮನ್ನು ನಿಷ್ಕಾಮ ಪ್ರೀತಿ, ಪ್ರತಿಫಲಾಪೇಕ್ಷೆ ಇಲ್ಲದೆ ಪೋಷಣೆ ಮಾಡುತ್ತದೆ. ಆದ್ದರಿಂದ ಹಸಿರು ನಮ್ಮ ಉಸಿರಾಗಬೇಕು, ಪರಿಸರ ಕಾಳಜಿ ನಿತ್ಯೋತ್ಸವವಾಗಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಹೇಗೆ ಬೆಳೆಯುತ್ತಾರೆ ಎಂದು ತೋಟದಲ್ಲಿ ತೋರಿಸುವ ಸನ್ನಿವೇಶ ನಿರ್ಮಾಣವಾಗಿದೆ. ಇದನ್ನೇ ಕೆಲವರು ಉದ್ಯಮ ಮಾಡಿಕೊಂಡಿದ್ದಾರೆ. ಕೋವಿಡ್ ನಮಗೆ ಹಲವು ಪಾಠ ಕಲಿಸಿತು. ಗ್ರಾಮ, ನಗರ ಪ್ರದೇಶಗಳಿಗೆ ಪ್ರಾಣಿಗಳು ಬರುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಕೋವಿಡ್ ಕಲಿಸಿದ ಪಾಠವನ್ನು ಮನುಷ್ಯ ಅರ್ಥ ಮಾಡಿಕೊಳ್ಳಲಿಲ್ಲ. ಒತ್ತುವರಿ ಮಾಡುವುದರಲ್ಲಿ ನಮಗೆ ಖುಷಿ, ಸಂತೋಷ ಜಾಸ್ತಿ. ಪರಿಸರಕ್ಕೆ ಮನುಷ್ಯನ ಆಸೆಗಳನ್ನು ಪೂರೈಸುವ ಸಾಮರ್ಥ್ಯ ಇದೆ, ದುರಾಸೆಗಳನ್ನು ಅಲ್ಲ ಎಂದು ಹೇಳಿದರು.

ಗಿಡ ನೆಡುವುದು ನಮ್ಮ ಜವಾಬ್ದಾರಿ. ಪ್ರಚಾರ, ಪ್ರಶಸ್ತಿಗಾಗಿ ಗಿಡ ನೆಡಬಾರದು. ಕರ್ನಾಟಕದಲ್ಲಿ ಆರೂವರೆ ಕೋಟಿ ಜನರಿದ್ದಾರೆ. ಒಬ್ಬರು ಎರಡು ಗಿಡ ನೆಟ್ಟರೂ 12-13 ಕೋಟಿ ಮರಗಳು ಬೆಳೆಯುತ್ತವೆ. ಇದರ ಮಹತ್ವವನ್ನು ಮನುಷ್ಯ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ವಿಷಾದಿಸಿದರು.

ಇದನ್ನೂ ಓದಿ | KRS Dam: ಖಾಲಿಯಾಗಿದೆ ಕೆಆರ್‌ಎಸ್‌! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್‌ ಕಥೆ!

ಹಸಿರು ಮೈಸೂರು-ಲಕ್ಷ ವೃಕ್ಷ ಆಂದೋಲನ ಭಾಗವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಸಿ ವಿತರಣೆ ಮಾಡಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ಮನುಷ್ಯ ಕೃತಕವಾಗಿ ಯಾವುದನ್ನೂ ಸೃಷ್ಟಿ ಮಾಡಲಾರ. ಮನುಷ್ಯನಿಗೆ ಸೌಲಭ್ಯ ಬೇಕು. ಆದರೆ, ನಮಗೆ ಆಧಾರವಾಗಿರುವ ಪರಿಸರ ನಾಶವಾಗಬಾರದು. ಮರ ಕಡಿಯದೆ ರಸ್ತೆ, ಬಡಾವಣೆ ಮಾಡಲು ಸಾಧ್ಯವಿಲ್ಲ. ಆದರೆ, ಕಡಿದ ಮರಕ್ಕೆ ಪರ್ಯಾಯವಾಗಿ ಗಿಡ ಬೆಳೆಸಬೇಕು ಎಂದು ಸಲಹೆ ನೀಡಿದರು.

ಗಿಡವನ್ನು ಜೋಪಾನ ಮಾಡುವ ಹೊಣೆಗಾರಿಕೆಯನ್ನು ಎಲ್ಲರೂ ಕಲಿಯಬೇಕು. ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದ ಸ್ವಾಮೀಜಿ, ರಾಜೀವ್ ಅವರು ಪ್ರತಿ ವರ್ಷದಂತೆ ಗಿಡ ವಿತರಣೆ ಮಾಡುತ್ತಿದ್ದಾರೆ. ಪರಿಸರ ರಕ್ಷಣೆ ದೃಷ್ಟಿಯಿಂದ ಅವರು ಮಾಡುತ್ತಿರುವ ಸೇವಾಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಇದನ್ನೂ ಓದಿ | Weather Report: ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ; ಬೆಂಗಳೂರು ಆಯ್ತು ಕೂಲ್‌, ಕರಾವಳಿ ಫುಲ್‌ ರೈನ್‌

ಹಸಿರು ಮೈಸೂರು-ಲಕ್ಷ ವೃಕ್ಷ ಆಂದೋಲನದ ರೂವಾರಿ ಎಚ್.ವಿ.ರಾಜೀವ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಪತ್ರಕರ್ತ ವಿಕ್ರಂ ಮುತ್ತಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

Exit mobile version