Site icon Vistara News

Free Bus Service: ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲಿ: ಶಾಸಕ ಶಿವರಾಮ್‌ ಹೆಬ್ಬಾರ್

MLA Shivaram Hebbar

#image_title

ಯಲ್ಲಾಪುರ: ಬಿಜೆಪಿ ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡಿ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ದಿ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ನೂತನ ಸರ್ಕಾರ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಸಂಚಾರ ಯೋಜನೆಗೆ (Free Bus Service) ಚಾಲನೆ ನೀಡಿದೆ ಎಂದು ಶಾಸಕ ಶಿವರಾಮ್‌ ಹೆಬ್ಬಾರ್ ಹೇಳಿದರು.

ಭಾನುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ “ಶಕ್ತಿ” ಯೋಜನೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಾನು ನಿಗಮದ ಅಧ್ಯಕ್ಷನಾಗಿದ್ದಾಗ ನಿಗಮದ ಅನೇಕ ಸಮಸ್ಯೆಗಳನ್ನು ಅರಿತಿದ್ದೇನೆ. ಸರ್ಕಾರ ಸಾರಿಗೆ ನಿಗಮಗಳ ನಷ್ಟ ಸರಿದೂಗಿಸುವತ್ತ ಗಮನಹರಿಸಬೇಕು. ಸರ್ಕಾರದ ಯೋಜನೆಗಳು ಎಲ್ಲರ ಸಹಕಾರದಿಂದ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ವಾಕರಸಾಸಂ ನಿಗಮದ ಮಾಜಿ ಅಧ್ಯಕ್ಷ, ಮಾಜಿಶಾಸಕ ವಿ.ಎಸ್‌. ಪಾಟೀಲ ಮಾತನಾಡಿ, ಕೆಎಸ್‌ಆರ್‌ಟಿಸಿ ನಿಗಮ ನಷ್ಟದಲ್ಲಿದ್ದರೂ ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತುಕೊಟ್ಟು ರಾಜ್ಯದಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ. ನಮ್ಮ ಜಿಲ್ಲೆಯಲ್ಲಿ 477 ಬಸ್‌ಗಳು ಸಂಚರಿಸುತ್ತಿವೆ. ಸುಮಾರು 80 ರಿಂದ 90 ಸಾವಿರ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಿದ್ದಾರೆ. ಅನಾವಶ್ಯಕ ತಿರುಗಾಟಕ್ಕೆ ಆಸ್ಪದವಾಗದಂತೆ ಸಂಸ್ಥೆ ನಮ್ಮದು ಎಂಬ ಭಾವನೆಯಿಂದ ಅವಶ್ಯವಿದ್ದಲ್ಲಿ ಮಾತ್ರ ಸಂಚರಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ | Free Bus Service : ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಜಾರಿ: ಡಿಕೆಶಿ ಘೋಷಣೆ

ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದುಕೊಂಡಿದೆ. ವಿರೋಧಪಕ್ಷವರಿಗೆ ಈ ಎಲ್ಲ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆಂಬ ವಿಶ್ವಾಸವೇ ಇರಲಿಲ್ಲ ಎಂದರು.

ಬಸ್‌ನಲ್ಲಿ ಮಹಿಳೆಯರಿಗೆ ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಲಾಯಿತು. ಪ್ರಮುಖರಾದ ವಿಜಯ ಮಿರಾಶಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್‌, ಕೆಎಸ್‌ಆರ್‌ಟಿಸಿ ಉಗ್ರಾಣಾಧಿಕಾರಿ ಚಂದ್ರಶೇಖರ, ಘಟಕ ವ್ಯವಸ್ಥಾಪಕ ಸಂತೋಷ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವಕರ,‌ ಪ್ರಶಾಂತ ಸಭಾಹಿತ, ಎನ್‌.ಕೆ. ಭಟ್ ಮುಂತಾದವರು ಇದ್ದರು.

Exit mobile version