ಬೆಂಗಳೂರು: ಎರಡು ವರ್ಷ ಕಾಲ ಪರವಾನಗಿ ನವೀಕರಿಸದೆ (Licence renewal) ಅಕ್ರಮವಾಗಿ ರಿವಾಲ್ವರ್ ಇಟ್ಟುಕೊಂಡ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ್ ರೆಡ್ಡಿಯನ್ನು (Somashekhar Reddy) ದೋಷಿಯಾಗಿ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ರೆಡ್ಡಿ ಅವರಿಗೆ ರಿಲೀಫ್ ನೀಡಿದೆ.
ಏನಿದು ಲೈಸೆನ್ಸ್ ನವೀಕರಿಸದ ಪ್ರಕರಣ
ಸೋಮಶೇಖರ ರೆಡ್ಡಿ ಅವರು 2006ರಲ್ಲಿ ಪರವಾನಗಿ ಪಡೆದು ರಿವಾಲ್ವರ್ ಖರೀದಿಸಿದ್ದರು. 2009ರ ಡಿಸೆಂಬ್ 31ಕ್ಕೆ ಪರವಾನಗಿ ಅವಧಿ ಮುಗಿದಿತ್ತು. ಪರವಾನಗಿ ನವೀಕರಿಸಿಕೊಳ್ಳದೆ ಹಾಗೂ ಸಂಬಂಧಿತ ಠಾಣೆಗೆ ಹಿಂದಿರುಗಿಸದೆ 2010ರ ಜನವರಿ 1ರಿಂದ 2011ರ ನವೆಂಬರ್ 9ರವರೆಗೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಂಡಿದ್ದರು. 2011ರ ನವೆಂಬರ್ 10ರಂದು ರಿವಾಲ್ವಾರ್ ಅನ್ನು ಠಾಣೆಗೆ ತಲುಪಿಸಿದ್ದರು. 2011ರ ನವೆಂಬರ್ 16ರಂದು ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದ್ದರು. ಸಂಬಂಧಿತ ಪ್ರಾಧಿಕಾರವು 360 ರೂಪಾಯಿ ದಂಡ ಸಂಗ್ರಹಿಸಿ ಪರವಾನಗಿ ನವೀಕರಿಸಲಾಗಿತ್ತು.
ಈ ನಡುವೆ, 2010ರ ಜನವರಿ 1ರಿಂದ 2011ರ ನವೆಂಬರ್ 9ರವರೆಗೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಳ್ಳುವ ಮೂಲಕ ಸೋಮಶೇಖರ ರೆಡ್ಡಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ 2013ರಲ್ಲಿ ದೂರು ನೀಡಿದ್ದರು.
ಅದನ್ನು ಆಧರಿಸಿ 2013ರ ಆಗಸ್ಟ್ 3ರಂದು ಬಳ್ಳಾರಿಯ ಬ್ರೂಸ್‌ಪೇಟೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ, ಪೊಲೀಸರು ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 21(1) 25(ಎಚ್) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಸೋಮಶೇಖರ ರೆಡ್ಡಿ ಅವರನ್ನು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ-1959ರ ಸೆಕ್ಷನ್ 25(1-ಬಿ)(ಎಚ್) ಅಡಿಯಲ್ಲಿ ಅಪರಾಧಿ ಎಂಬುದಾಗಿ ಘೋಷಿಸಿ 2022ರ ಅಕ್ಟೋಬರ್ 18ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಸೋಮಶೇಖರ ರೆಡ್ಡಿ ಅವರು ಬೆಂಗಳೂರಿನ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ (ವಿಶೇಷ ನ್ಯಾಯಾಲಯ) ಮೇಲ್ಮನವಿ ಸಲ್ಲಿಸಿದ್ದರು. ಆ ನ್ಯಾಯಾಲಯವೂ ಸಹ ರೆಡ್ಡಿ ಅವರನ್ನು ದೋಷಿಯಾಗಿ ತೀರ್ಮಾನಿಸಿ 2023ರ ಫೆಬ್ರವರಿ 28ರಂದು ಆದೇಶಿಸಿತ್ತು. ಆದರೆ, ಸನ್ನಡತೆ ಪರಿಗಣಿಸಿ ಯಾವುದೇ ಶಿಕ್ಷೆ ವಿಧಿಸದ ಕೋರ್ಟ್, 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅಷ್ಟು ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಉತ್ತಮ ನಡತೆ ಮುಂದುವರಿಸಬೇಕು. ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಷರತ್ತು ವಿಧಿಸಿತ್ತು.
ಇದರಿಂದ ದೋಷಿಯಾಗಿ ತೀರ್ಮಾನಿಸಿದ ವಿಚಾರಣಾಧೀನ ನ್ಯಾಯಾಲಯಗಳ ಆದೇಶ ರದ್ದು ಕೋರಿ ಸೋಮಶೇಖರ ರೆಡ್ಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮುಂದಿನ ಆದೇಶದವರೆಗೆ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿತು.
ಇದನ್ನೂ ಓದಿ : Karnataka Elections : ಲಕ್ಷ್ಮಣ ಸವದಿ ನಾಳೆ ಮೇಲ್ಮನೆ, ಬಿಜೆಪಿಗೆ ವಿದಾಯ; ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ರೆಡಿ