ರಾಯಚೂರು: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಶನಿವಾರ ಬಹಿರಂಗವಾಗಲಿದೆ. ಈ ಮಧ್ಯೆ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ನನಗೆ ಕೊಲೆ ಬೆದರಿಕೆಯ (Life threat) ಕರೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮೇ 11 ರಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯಲ್ಲಿ ನನಗೆ 3 ಪೋನ್ ನಂಬರ್ ಗಳ ಮೂಲಕ ಕೊಲೆ ಬೆದರಿಕೆ ಕರೆ ಬಂದಿದೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಹಾಕಲಾಗಿದೆ, ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಕಾರ್ಯಕರ್ತರಿಗೂ ಕರೆ ಮಾಡಿ ಹೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಕೈಗೊಂಡು ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಖಲಿಸ್ತಾನಿಗಳು ತ್ರಿವರ್ಣ ಧ್ವಜ ತೆರವು ಮಾಡಿದ್ದ ಪ್ರಕರಣ; ತನಿಖೆಗಾಗಿ ಲಂಡನ್ಗೆ ಹೊರಟ ಎನ್ಐಎ ಅಧಿಕಾರಿಗಳು
ಈ ಬಗ್ಗೆ ಪೊಲೀಸರು ಸೂಕ್ತ ರಕ್ಷಣೆ ನೀಡಿ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಪ್ರಕರಣ ದಾಖಲಾಗಿಲ್ಲ.
ಗಮನಕ್ಕೆ ಬಂದಿದೆ ಸೂಕ್ತ ಕ್ರಮ – ಎಸ್ಪಿ
ಈ ಕುರಿತು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾತನಾಡಿ, ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಗೆ ದೂರು ಬಂದಿದೆ. ಈಗಾಗಲೇ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ದೂರುದಾರರಿಂದ ನಂಬರ್ ಪಡೆಯಲಾಗಿದೆ. ಮೂರು ಪೋನ್ ನಂಬರ್ ಪರಿಶೀಲನೆ ನಡೆಸಿ ಏನು ಸಂಭಾಷಣೆ ಆಗಿದೆ ಎಂದು ತಿಳಿದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದೂರುದಾರರಿಗೆ ಸೂಕ್ತ ರಕ್ಷಣೆಯ ಅವಶ್ಯಕತೆ ಇದ್ದಲ್ಲಿ ರಕ್ಷಣೆ ಕೊಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.