ಹಾಸನ: ಶಿರಾಡಿ ಘಾಟ್‌ನಲ್ಲಿ ಭೂಕುಸಿತದಿಂದಾಗಿ ನಿಷೇಧಕ್ಕೆ ಒಳಗಾಗಿದ್ದ ವಾಹನ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವಕಾಶ ನೀಡಿದ್ದಾರೆ.
ಸದ್ಯ ಕಾರು, ಬಸ್, ಸೇರಿ ಲಘು ವಾಹನಗಳು ಹಾಗೂ ಆರು ಚಕ್ರದ ವಾಹನಗಳ ಓಡಾಟ ಆರಂಭ ಮಾಡಲಾಗಿದೆ. ಭಾರಿ ಮಳೆಯಿಂದ ಕಳೆದ ಶುಕ್ರವಾರದಿಂದ ಎರಡು ಕಡೆ ಭೂಕುಸಿತ ಹಾಗೂ ರಸ್ತೆ ಕುಸಿತದಿಂದ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗಿತ್ತು. ತಾತ್ಕಾಲಿಕ ಕಾಮಗಾರಿ ನಡೆಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಎರಡು ಕಡೆ ಪೊಲೀಸ್ ಚೆಕ್‌ಪೋಸ್ಟ್
ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ತುರ್ತು ವಾಹನಗಳನ್ನು ಬಿಟ್ಟು ಎಲ್ಲ ತರಹದ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಇಪ್ಪತ್ತು ಟನ್‌ಗಿಂತ ಕಡಿಮೆ ತೂಕದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಭೂಕುಸಿತವಾಗಿರುವ ಜಾಗದಲ್ಲಿ ಏಕಮುಖವಾಗಿ ಸಂಚರಿಸಬೇಕು. ದಕ್ಷಿಣ ಕನ್ನಡ ಹಾಗೂ ಉಪ್ಪಿನಂಗಡಿ ಪೊಲೀಸರೊಂದಿಗೂ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | ಹಾಸನದಲ್ಲಿ ಕಾಡಾನೆಗಳ ಹಾವಳಿ: ಮನೆ ಬಾಗಿಲಿಗೆ ಎಂಟ್ರಿ ಕೊಟ್ಟ ಗಜರಾಜ ಮಾಡಿದ್ದೇನು?