ಬೆಂಗಳೂರು: ಕಾಡುಗುಡಿಯಲ್ಲಿ ವಿದ್ಯುತ್ ಶಾಕ್‌ನಿಂದ ತಾಯಿ-ಮಗು ದಾರುಣವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ವಿದ್ಯುತ್ ಅವಘಡ (Electric Shock) ನಡೆದಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀಮಸಂದ್ರದಲ್ಲಿ ವಿದ್ಯುತ್ ಶಾಕ್‌ನಿಂದ ಲೈನ್‌ಮ್ಯಾನ್ ಕೊನೆಯುಸಿರೆಳೆದಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದ್ದು, ಘಟನೆಗೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಜು (40) ಮೃತ ಲೈನ್ ಮ್ಯಾನ್. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯೂಸ್ ದುರಸ್ತಿಗಾಗಿ ಕಂಬ ಏರಿದ್ದಾಗ ವಿದ್ಯುತ್ ಶಾಕ್‌ನಿಂದ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಲೈನ್‌ಮ್ಯಾನ್ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Self Harm: ಇಂಟರ್‌ನೆಟ್ ದ್ವೇಷದ ಕಾಮೆಂಟ್‌ಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಕ್ವಿಯರ್ ಕಲಾವಿದ
ಸಿದ್ದರಾಜು ಅವರು ಬೆಸ್ಕಾಂನಲ್ಲಿ 15 ವರ್ಷದಿಂದ ಕೆಲಸ ಮಾಡುತ್ತಿದ್ದರು. 6 ತಿಂಗಳ ಹಿಂದೆ ಯಾವುದೋ ಕಿರಿಕಿರಿಯಿಂದ ಆವಲಹಳ್ಳಿಗೆ ವರ್ಗಾವಣೆ ಮಾಡಿದ್ದರು. ಅವರಿಗೆ 15 ದಿನಗಳ ಹೆಣ್ಣು ಮಗು, 10 ವರ್ಷದ ಗಂಡು ಮಗು ಇದ್ದಾನೆ. ಪಿತೃತ್ವ ರಜೆಯಲ್ಲಿದ್ದರೂ ಕೆಲಸಕ್ಕೆ ಬರುವಂತೆ ಅಧಿಕಾರಿಗಳು ಒತ್ತಾಯಿಸಿದ್ದರು. ಬೆಳಗ್ಗೆ ಒಬ್ಬರನ್ನೇ ಕೆಲಸಕ್ಕೆ ಕಳುಹಿಸಿದ್ದಾರೆ. ವಿದ್ಯುತ್ ತಗುಲಿ ಟ್ರಾನ್ಸ್‌ಫಾರ್ಮ್‌ನಿಂದ ಬಿದ್ದಾಗ ಯಾವ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆ ಬಂದೇ ಇಲ್ಲ ಎಂದು ನಾದಿನಿ ಚೈತ್ರಾ ಆರೋಪಿಸಿದ್ದಾರೆ.
ಎಇಇ, ಜೆಇಇ ಕಿರುಕುಳದಿಂದ ಈ ರೀತಿಯ ದುರಂತ ನಡೆದಿದೆ. ಅಧಿಕಾರಿಗಳು ಸುಖವಾಗಿ ಕಚೇರಿಯಲ್ಲಿ ಕುಳಿತಿರುತ್ತಾರೆ. ಸಿಬ್ಬಂದಿಯ ಕಷ್ಟ ಯಾರು ಕೇಳುತ್ತಾರೆ. ಘಟನೆ ನಡೆದ ಮೇಲೆ ಬೈಕ್‌ನಲ್ಲಿ ಲೈನ್‌ಮ್ಯಾನ್ ಅನ್ನು ಕರೆದುಕೊಂಡುಬಂದಿದ್ದಾರೆ. ಆಂಬುಲೆನ್ಸ್‌ಗೆ ಕೂಡ ಕರೆ ಮಾಡಿಲ್ಲ. ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ವೈಟ್ ಫೀಲ್ಡ್ ಸಮೀಪ ತಾಯಿ-ಮಗು ಮೃತ್ಯು
ಬೆಂಗಳೂರು: ವಿದ್ಯುತ್ ತಗುಲಿ ತಾಯಿ-ಮಗು ಸುಟ್ಟು ಕರಕಲಾಗಿದ್ದ ಘಟನೆ ಬೆಂಗಳೂರು ಹೊರವಲಯದ ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ನವೆಂಬರ್ 19ರಂದು ನಡೆದಿತ್ತು. ಎ.ಕೆ ಗೋಪಾಲ್ ಕಾಲೋನಿಯ ಸಂತೋಷ್ ಎಂಬುವವರ ಪತ್ನಿ ಸೌಂದರ್ಯ ಮತ್ತು ಪುತ್ರಿ ಲಿಯಾ ಮೃತರು. ಬಸ್ಸಿನಿಂದ ಇಳಿದು ಮನೆ ಕಡೆಗೆ ಸಾಗುತ್ತಿದ್ದಾಗ ರಸ್ತೆ ಬದಿ ತುಂಡಾಡಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದರಿಂದ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರು.
ಇದನ್ನೂ ಓದಿ | Online gambling: ಆನ್‌ಲೈನ್ ಆಟಕ್ಕೆ ಬದುಕಿನ ಓಟ ಮುಗಿಸಿದ ದಂಡು ಮಂಡಳಿ ಸಿಇಒ! ವಿಷ ಸೇವಿಸಿ ಆತ್ಮಹತ್ಯೆ
ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವಿಗೀಡಾದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಮೃತರ ಕುಟುಂಬಸ್ಥರು, ಸ್ಥಳೀಯರು ಕಾಡುಗುಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಐವರು ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಯನ್ನು ಪೊಲೀಸರು ಬಂದಿಸಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಇಂಧನ ಇಲಾಖೆ ಅಮಾನತು ಮಾಡಿತ್ತು. ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು.