ಬೆಂಗಳೂರು: ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎನ್ನುವುದನ್ನೇ ಪ್ರಧಾನವಾಗಿಸಿಕೊಂಡು ಚುನಾವಣೆಯಲ್ಲಿ ಜನರನ್ನು ತಮ್ಮತ್ತ ಸೆಳೆಯಬೇಕು ಎಂದು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಸಮುದಾಯದ (Lingayath Politics) ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಚಾಲುಕ್ಯ ವೃತ್ತದ ಬಳಿಯಿರುವ ಬಸವ ಭವನದಲ್ಲಿ ಸೋಮವಾರ ಸಭೆ ಸೇರಿದ ಕಾಂಗ್ರೆಸ್ ನಾಯಕರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ಸಮುದಾಯದ ಮತಗಳನ್ನು ಸೆಳೆಯುವ ಕುರಿತು ಚರ್ಚೆ ನಡೆಸಿದ್ದಾರೆ.
ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ , ಎಂ.ಬಿ. ಪಾಟೀಲ್ ,ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು. ಸಮುದಾಯಕ್ಕಾಗಿ ಹೆಚ್ಚು ಟಿಕೆಟ್ ಪಡೆಯಲು ನಡೆದ ಸಭೆಯಲ್ಲಿ ಚರ್ಚೆಯಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಟಿಕೆಟ್ ಆಕಾಂಕ್ಷಿಗಳು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುವಂತೆ ಒತ್ತಾಯ ಮಾಡಿ ಎಂದರು. ಸಮುದಾಯದ ನಾಯಕರು ಹೈಕಮಾಂಡ್ ಎದುರು ಸಿಎಂ ಸ್ಥಾನದ ಬೇಡಿಕೆ ಇಡಬೇಕು. ಕಾಂಗ್ರೆಸ್ ನಲ್ಲಿ ವೀರೇಂದ್ರ ಪಾಟೀಲ್ ರ ಬಳಿಕ ಲಿಂಗಾಯತರಿಗೆ ಸಿಎಂ ಪಟ್ಟ ಸಿಕ್ಕಿಲ್ಲ. ಪಕ್ಷದಲ್ಲಿ ಎಷ್ಟೇ ದುಡಿದರೂ ಸಚಿವ ಸ್ಥಾನಕ್ಕೆ ಸಮಾಧಾನ ಆಗುವ ಸ್ಥಿತಿಯಿದೆ. ಹಾಗಾಗಿ ಈ ಬಾರಿ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನದ ಬೇಡಿಕೆ ಇಡಿ ಎಂದು ಅನೇಕರು ಒತ್ತಾಯಿಸಿದ್ದಾರೆ. ಸಿಎಂ ಸ್ಥಾನದ ಜತೆಗೆ 65 ಟಿಕೆಟ್ ಗಾಗಿ ಬೇಡಕೆ ಇಡಬೇಕು. ಈ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವುದನ್ನೇ ಪ್ರಮುಖ ವಿಚಾರವಾಗಿಸಿಕೊಳ್ಳಬೇಕು ಎಂಬ ಕುರಿತು ಸಹ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನೆಗ್ಲಕ್ಟ್ ಮಾಡ್ತಿರುವ ವಿಚಾರವನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು. ಈಗಾಗಲೇ ನಮ್ಮ ಸಮುದಾಯದಲ್ಲಿ ಈ ಬಗ್ಗೆ ಬೇಸರವಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಚೆರ್ಚೆ ನಡೆದಿದೆ.
ಇದನ್ನೂ ಓದಿ: B.Y. Vijayendra: ಸಿದ್ದರಾಮಯ್ಯಗೆ ಯಡಿಯೂರಪ್ಪ ಸೂಕ್ತ ಸಮಯದಲ್ಲಿ ಸರಿಯಾದ ಉತ್ತರ ಕೊಡ್ತಾರೆ: ಬಿ.ವೈ. ವಿಜಯೇಂದ್ರ
ವೀರಶೈವ ಲಿಂಗಾಯತ ಎಂದೇ ಚುನಾವಣೆಗೆ ಹೋಗಬೇಕು. ಸಮುದಾಯದಲ್ಲಿ ಒಳ ಜಗಳ ಬೇಡ. ನಾನು ಪಂಚಮಸಾಲಿ, ಗಾಣಿಗ, ಸಾದರ ಲಿಂಗಾಯತ ಅನ್ನೋ ಭೇದಭಾವ ಬೇಡ. ನಾವು ಎಲ್ಲರೂ ಒಂದೇ ವೀರಶೈವ ಲಿಂಗಾಯತ ಕೋಟಾದಲ್ಲಿ ಸ್ಥಾನ ಪಡೆಯಬೇಕು. ಒಟ್ಟು 73 ಟಿಕೆಟ್ ಪಡೆಯಬೇಕು. ಈ ಬಾರಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನ ಗೆಲ್ಲಬೇಕು. ಪಕ್ಷ ಅಧಿಕಾರಕ್ಕೆ ಬಂದ್ರೆ ಎಂ.ಬಿ. ಪಾಟೀಲ್ ಮತ್ತು ಈಶ್ಚರ್ ಖಂಡ್ರೆ ಅವರಿಗೆ ಪ್ರಮುಖ ಸ್ಥಾನದ ಬೇಡಿಕೆ ಇಡಬೇಕು. ಕಾಂಗ್ರೆಸ್‌ನಲ್ಲಿ ಲಿಂಗಾಯತರನ್ನು ಸಿಎಂ ಮಾಡಲ್ಲ ಅನ್ನೋ ಕೂಗು ಇದೆ. ಈ ಬಾರಿ ಹೆಚ್ಚು ಸ್ಥಾನ ಗೆದ್ದು ಕ್ಲೇಮ್ ಮಾಡಬೇಕು ಎಂದು ನಿರ್ಧಾರ ಆಗಿದೆ ಎನ್ನಲಾಗಿದೆ.