ಬೆಂಗಳೂರು: ಅತಿ ಹೆಚ್ಚು ಲಿಂಗಾಯತ ಸಮುದಾಯದ ಶಾಸಕರು ಕಾಂಗ್ರೆಸ್‌ನಲ್ಲಿ ಗೆದ್ದಿದ್ದಾರೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ (Karnataka CM) ಸ್ಥಾನಕ್ಕೆ ಒತ್ತಡ ಹಾಕುವುದು ಬೇಡ. ಕನಿಷ್ಠ ಡಿಸಿಎಂ ಸ್ಥಾನಕ್ಕಾದರೂ ಒತ್ತಡ ಹಾಕಬಹುದಿತ್ತು. ಇದನ್ನು ನಾನು ಹೇಳುತ್ತಿಲ್ಲ, ರಾಜ್ಯದ ಜನ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಶಾಸಕರಾದ ಮೇಲೆ ಇದೇ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಲಿಂಗಾಯತರಿಗೆ ಉನ್ನತ ಸ್ಥಾನ ಕೊಡದ ವಿಚಾರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: SSLC Results 2023: ರೈತನ ಮಗ ಈಗ SSLC ಟಾಪರ್; ಐಐಟಿ ಸೇರುವುದೇ ಗುರಿ ಎಂದ ಭೀಮನಗೌಡ
ಈ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಅನುದಾನಗಳನ್ನು, ಟೆಂಡರ್ ಕಾಮಗಾರಿಗಳನ್ನು ಈ ಸರ್ಕಾರ ತಡೆಹಿಡಿದಿರುವುದು ನಿರೀಕ್ಷಿತ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದು ಕಾರ್ಯಕರ್ತರ ಹತ್ಯೆಗಳಾಯಿತು. ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ಮಾಡಿದ್ದನ್ನು ನಾವು ಮರೆತಿಲ್ಲ. ಈಗ ಅನುದಾನವನ್ನು ತಡೆಹಿಡಿದಿರೋದು ನಿಜಕ್ಕೂ ದುರಂತವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ಕೇವಲ ಪಕ್ಷಕ್ಕಲ್ಲ, ಅವರು ರಾಜ್ಯಕ್ಕೆ ಮುಖ್ಯಮಂತ್ರಿ ಎಂದು ವಿಜಯೇಂದ್ರ ಹೇಳಿದರು.
ನಮ್ಮ ಪಕ್ಷದ ಸೋಲಿನ ಹೊಣೆಯನ್ನು ಯಾರೋ ಒಬ್ಬರ ಮೇಲೆ ಕಟ್ಟುವುದಲ್ಲ. ಈ ಸೋಲಿನ ಹೊಣೆಯನ್ನು ಎಲ್ಲರೂ ಹೊರಬೇಕಿದೆ. ಈ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.
ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಪ್ರವೇಶ ಮಾಡಿದ ವಿಜಯೇಂದ್ರ
ವಿಧಾನಸೌಧದ ಮೆಟ್ಟಿಲಿಗೆ ಬಗ್ಗಿ ಕೈಮುಗಿದ ವಿಜಯೇಂದ್ರ ಅವರು ನಮಸ್ಕರಿಸಿ ಒಳಗೆ ಹೋದರು. ಈ ವೇಳೆ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರ ಆರಾಧ್ಯ ದೈವ ಹುಚ್ಚರಾಯಸ್ವಾಮಿ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಪ್ರಜಾಪ್ರಭುತ್ವದ ದೇವಾಲಯಕ್ಕೆ ಮೊದಲ ಭಾರಿ ಶಾಸಕನಾಗಿ ಬಂದಿದ್ದೇನೆ. ನನಗೆ ಹೆಮ್ಮೆ ಅನಿಸುತ್ತಿದೆ. ಶಿಕಾರಿಪುರ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಬೆನ್ನುತಟ್ಟಿದ ಸಿದ್ದರಾಮಯ್ಯ
ವಿಧಾನಸೌಧ ಮೊಗಸಾಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನೂತನ ಶಾಸಕ ಬಿ.ವೈ. ವಿಜಯೇಂದ್ರ ಮುಖಾಮುಖಿಯಾದರು. ಈ ವೇಳೆ ಶಾಸಕನಾಗಿ ವಿಧಾನಸಭೆ ಪ್ರವೇಶ ಮಾಡಿದ್ದಕ್ಕೆ ಸಿದ್ದರಾಮಯ್ಯ ಶುಭಾಶಯ ಕೋರಿ ಬೆನ್ನು ತಟ್ಟಿದರು. ಅದಕ್ಕೆ ವಿಜಯೇಂದ್ರ ಧನ್ಯವಾದ ಹೇಳಿದರು.
ಆಗ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಮ್ಮ ತಂದೆ ಯಡಿಯೂರಪ್ಪ ಫೋನ್ ಮಾಡಲು ಹೇಳಿದ್ದರು ಎಂದು ಹೇಳಿದರು. ಆಗ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, “ಬೇಡ ನಾನೇ ನೇರವಾಗಿ ಭೇಟಿ ಮಾಡುತ್ತೇನೆ ಎಂದು ಸುಮ್ಮನಾದೆ ಎಂದು ಹೇಳಿದ್ದಾರೆ.