ಬೆಂಗಳೂರು: ನರಹಳ್ಳಿ ಪ್ರತಿಷ್ಠಾನದ ಈ ವರ್ಷದ ಎರಡು ಮಹತ್ವದ ಪ್ರಶಸ್ತಿಗಳನ್ನು (literature award) ಕನ್ನಡದ ಸಾಹಿತಿ, ಪತ್ರಕರ್ತರಾದ ಜೋಗಿ ಮತ್ತು ರಘುನಾಥ ಚ.ಹ ಅವರಿಗೆ ನೀಡಲಾಗಿದೆ.
ಪ್ರತಿಷ್ಠಾನದ ದಶಮಾನೋತ್ಸವ ಗೌರವದ ಅಂಗವಾಗಿ, ಯುವ ಸಮುದಾಯವನ್ನು ಪ್ರೋತ್ಸಾಹಿಸಿದ ಕುರುಹಾಗಿ ಇತ್ತೀಚಿನ ವರ್ಷಗಳಲ್ಲಿ ಹೊಸತಲೆಮಾರಿನ ಬರಹಗಾರರನ್ನು ರೂಪಿಸುತ್ತಿರುವ ನುಡಿರೂವಾರಿ ಜೋಗಿ ಅವರಿಗೆ ನರಹಳ್ಳಿ ದಶಮಾನೋತ್ಸವ ಪುರಸ್ಕಾರವನ್ನು ನೀಡಲು ಸಮಿತಿಯು ನಿರ್ಧರಿಸಿದ್ದು ರೂಪಾಯಿ ಹದಿನೈದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.
ಪ್ರತಿವರ್ಷ ಯುವ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ನರಹಳ್ಳಿ ಪ್ರತಿಷ್ಠಾನವು 2023ನೆಯ ಸಾಲಿಗೆ ಬರಹಗಾರ ಚ. ಹ ರಘುನಾಥ್ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಬಿ. ಆರ್. ಲಕ್ಷಣರಾವ್, ಸಿ. ಕೆ. ರಾಮೇಗೌಡ, ನ. ರವಿಕುಮಾರ್, ರಜನಿ ನರಹಳ್ಳಿ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭವು ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದಲ್ಲಿ ಅಕ್ಟೋಬರ್ 8ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಹಾಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು ಹಿರಿಯ ಕವಿ ಡಾ. ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷರಾದ ಎಚ್. ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಶ್ರೀಮತಿ ಪ್ರೇಮಾ ಉಪಾಧ್ಯ ಮತ್ತು ತಂಡದವರು ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಡುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಆನಂದರಾಮ ಉಪಾಧ್ಯ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ
ಜೋಗಿ
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ… ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು, ಬಿ ಕ್ಯಾಪಿಟಲ್, ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ, ನಾಳೆ ಬಾ, ಅಶ್ವಥ್ಥಾಮನ್, ಎಲ್ (ಕಾದಂಬರಿ), ಆಸ್ಕ್ ಮಿಸ್ಟರ್, ಜೋಗಿ ಕಾಲಂ, ನೋಟ್ ಬುಕ್, ಜೋಗಿ, ಹಸ್ತಿನಾವತಿ ( ಕಾದಂಬರಿ ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ರಘುನಾಥ ಚ.ಹ.
ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ‘ಸುಧಾ’ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಹೊಳೆಯಲ್ಲಿ ಹರಿದ ನೀರು’ (ಕವಿತೆಗಳು), ‘ಹೊರಗೂ ಮಳೆ ಒಳಗೂ ಮಳೆ’ (ಕಥೆಗಳು), ‘ರಾಗಿಮುದ್ದೆ’ (ಪ್ರಬಂಧ ಸಂಕಲನ), ‘ಚೆಲ್ಲಾಪಿಲ್ಲಿ:(ಲೇಖನಗಳು), ‘ವ್ಯಂಗ್ಯಚಿತ್ರ ವಿಶ್ವರೂಪ’ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ಅಣ್ಣಾ ಹಜಾರೆ (ಜೀವನ ಚಿತ್ರಗಳು), ಸತಿ ಸುಲೋಚನಾ (ಕನ್ನಡದ ಮೊದಲ ವಾಕ್ಚಿತ್ರದ ಕಥನ), ಚಂದನವನದ ಚಿನ್ನದ ಹೂಗಳು, ಪುಟ್ಟಲಕ್ಷ್ಮಿ ಕಥೆಗಳು (ಮಕ್ಕಳ ಕಥೆಗಳು), ಅಂಕಣ ವ್ಯಾಯೋಗ ಇವರ ಪ್ರಮುಖ ಕೃತಿಗಳು.
ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾರಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನ ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ, ವರ್ಧಮಾನ ಪ್ರಶಸ್ತಿ, ಕೆ. ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ, ದ.ರಾ.ಬೇಂದ್ರೆ ಟ್ರಸ್ಟ್‌ನ ಗ್ರಂಥ ಬಹುಮಾನ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅರಳು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮ ಭಟ್ಟ ದತ್ತಿ ಬಹುಮಾನ, ಶ್ರೀವಿಜಯ ಪ್ರಶಸ್ತಿ ಹಾಗೂ ಇವರ ʼಬೆಳ್ಳಿತೊರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.
ಇದನ್ನೂ ಓದಿ: Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ