Site icon Vistara News

Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Koo Shut Down

Little yellow bird says final goodbye: India’s Twitter rival Koo shuts down

ಬೆಂಗಳೂರು: ಜಾಗತಿಕ ಖ್ಯಾತಿಯ ಟ್ವಿಟರ್‌ಗೆ (ಈಗ ಎಕ್ಸ್)‌ ಸೆಡ್ಡು ಹೊಡೆಯುವ ದಿಸೆಯಲ್ಲಿ 2020ರಲ್ಲಿ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಅವರು ಪರಿಚಯಿಸಿದ್ದ ಕೂ ಸೋಷಿಯಲ್‌ ಮೀಡಿಯಾ ಅಪ್ಲಿಕೇಶನ್‌ (Koo Shut Down) ಈಗ ಇತಿಹಾಸದ ಪುಟ ಸೇರಿದೆ. ಹೌದು, ಕೂ ಅಪ್ಲಿಕೇಶನ್‌ (Koo Application) ಸ್ಥಗಿತಗೊಳಿಸುವುದಾಗಿ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ (Aprameya Radhakrishna) ಹಾಗೂ ಮಯಾಂಕ್‌ ಬಿಡವಟ್ಕ (Mayank Bidawatka) ಅವರು ಘೋಷಣೆ ಮಾಡಿದ್ದು, ಇದರಿಂದ ಕನ್ನಡಿಗರು ಅಭಿವೃದ್ಧಿಪಡಿಸಿದ, ದೇಶಾದ್ಯಂತ ಖ್ಯಾತಿ ಗಳಿಸಿದ್ದ, ಕೋಟ್ಯಂತರ ಜನರು ಬಳಸುತ್ತಿದ್ದ ಕೂ ಈಗ ‘ಕೂ’ಗು ನಿಲ್ಲಿಸಿದಂತಾಗಿದೆ.

ಕೂ ಸ್ಥಗಿತಗೊಳಿಸುವ ಕುರಿತು ಅಪ್ರಮೇಯ ರಾಧಾಕೃಷ್ಣ ಅವರು ಲಿಂಕ್ಡ್‌ ಇನ್‌ನಲ್ಲಿ ಬರೆದುಕೊಂಡಿದ್ದಾರೆ. “ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆ, ಅಪ್ಲಿಕೇಶನ್‌ಅನ್ನು ನಿರ್ವಹಣೆ ಮಾಡಲು ಭಾರಿ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. ಕೂ ಅಪ್ಲಿಕೇಶನ್‌ ನಿರ್ವಹಣೆಗೂ ಹೆಚ್ಚಿನ ಬಂಡವಾಳ ಬೇಕಾಗಿದ್ದು, ಇದಕ್ಕೆ ಅಧಿಕ ಪ್ರಮಾಣದಲ್ಲಿ ಹಣ ಹರಿದುಬಂದಿಲ್ಲ. ಬೇರೆ ಕಂಪನಿಗಳಿಗೆ ಮಾರಾಟ ಮಾಡುವ ಅಥವಾ ವಿಲೀನಗೊಳಿಸುವ ದಿಸೆಯಲ್ಲಿ ಸತತ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಹಾಗಾಗಿ, ಕೂ ಅಪ್ಲಿಕೇಶನ್‌ಅನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಕೂ ಅಪ್ಲಿಕೇಶನ್‌ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್‌ ಬಿಡವಟ್ಕ.

“ನಮಗೆ ಕೂ ಅಪ್ಲಿಕೇಶನ್‌ಅನ್ನು ಸ್ಥಗಿತಗೊಳಿಸಲು ಮನಸ್ಸಿರಲಿಲ್ಲ. ಹಾಗಾಗಿ, ಬೃಹತ್‌ ಇಂಟರ್‌ನೆಟ್‌ ಕಂಪನಿಗಳು, ಮೀಡಿಯಾ ಸಂಸ್ಥೆಗಳು ಸೇರಿ ಹತ್ತಾರು ಕಂಪನಿಗಳ ಜತೆ ವಿಲೀನ, ಮಾರಾಟದ ಕುರಿತು ಸತತ ಮಾತುಕತೆ ನಡೆಸಿದೆವು. ಆದರೆ, ಒಂದೇ ಒಂದು ಕಂಪನಿಯ ಜತೆ ನಾವು ವ್ಯವಹಾರ ಮಾಡಲು ಆಗಲಿಲ್ಲ. ಯಾರೂ ಕೂ ಕಂಪನಿಯನ್ನು ಖರೀದಿ ಮಾಡಲಿಲ್ಲ. ಕೂ ಅಪ್ಲಿಕೇಶನ್‌ಅನ್ನು ಇನ್ನಷ್ಟು ಜನಪ್ರಿಯಗೊಳಿಸಲು, ಜಾಗತಿಕ ಕಂಪನಿಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬದಲಾವಣೆ ತರಲು ಸುಮಾರು 6 ವರ್ಷಗಳ ಅವಧಿಗೆ ಬಂಡವಾಳದ ಅವಶ್ಯಕತೆ ಇತ್ತು. ಆದರೆ, ಅದನ್ನು ನಿರ್ವಹಣೆ ಮಾಡಲು ಆಗದ ಕಾರಣ ಸ್ಥಗಿತಗೊಳಿಸಲು ಮುಂದಾಗಿದ್ದೇವೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹಣಕಾಸು ಬಿಕ್ಕಟ್ಟಿನಿಂದಾಗಿ 2023ರಲ್ಲಿ ಕೆಲ ಉದ್ಯೋಗಿಗಳನ್ನೂ ವಜಾಗೊಳಿಸಲಾಗಿತ್ತು.

ಮೋದಿ ಕೂಡ ಬಳಸುತ್ತಿದ್ದರು

2020ರಲ್ಲಿ ಟ್ವಿಟರ್‌ಗೆ ಪರ್ಯಾಯವಾಗಿ ಕೂ ಸಾಮಾಜಿಕ ಜಾಲತಾಣದ ಪರಿಚಯಿಸಿದಾಗ ಅದು ಭಾರಿ ಖ್ಯಾತಿ ಗಳಿಸಿತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಜನ ಕೂ ಅಪ್ಲಿಕೇಶನ್‌ಅನ್ನು ಡೌನ್‌ಲೋಡ್‌ ಮಾಡಿಕೊಂಡರು. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸಚಿವರು, ಗಣ್ಯರು ಕೂ ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ದೇಶೀಯ ಜಾಲತಾಣಕ್ಕೆ ಬೆಂಬಲ ಸೂಚಿಸಿದರು. ದೇಶದ 9 ಸಾವಿರ ವಿಐಪಿಗಳು ಸೇರಿ ಒಂದು ಹಂತದಲ್ಲಿ ಪ್ರತಿದಿನ 21 ಲಕ್ಷ ದೇಶೀಯ ಬಳಕೆದಾರರು ‘ಕೂ’ಗೆ ಇದ್ದರು. ಆದರೆ, ಎಕ್ಸ್‌ ಜಾಲತಾಣಕ್ಕೆ ಸೆಡ್ಡು ಹೊಡೆಯಲು ಆಗದೆ, ಬೇರೆ ಬೇರೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಆಗದೆ, ಬಂಡವಾಳ ಸೆಳೆಯಲು ಆಗೆ ಈಗ ಕೂ ತೆರೆಗೆ ಸರಿಯುತ್ತಿದೆ.

ಇದನ್ನೂ ಓದಿ: Elon Musk: ಜಿಮೇಲ್ ಸ್ಥಗಿತ ವದಂತಿ ಮಧ್ಯೆಯೇ ಶೀಘ್ರ ‘ಎಕ್ಸ್‌ಮೇಲ್’ ಲಾಂಚ್!

Exit mobile version