ಬೆಂಗಳೂರು: ಲಿವರ್ ಸಿರೋಸಿಸ್ ಹಾಗೂ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿ ಲಿವರ್ ಕಸಿ ಮಾಡುವ ಮೂಲಕ ಬೆಂಗಳೂರಿನ ಟ್ರಸ್ಟ್‌ವೆಲ್ ಆಸ್ಪತ್ರೆಯ ವೈದ್ಯರು ಮರುಜೀವ ನೀಡಿದ್ದಾರೆ. ಮುಂಬೈ ಮೂಲದ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ವ್ಯಕ್ತಿಗೆ ಯಕೃತ್ತಿನ ಕಸಿ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಹೀಗಾಗಿ 6 ಗಂಟೆಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ.
ಯೋಗೇಶ್ ಅವರನ್ನು ಮೊದಲು ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಈ ವೇಳೆ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್‌ಗೆ ಒಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ, ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್‌ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ ಒಳಗಾಗಿದ್ದರು. ಈ ಎಲ್ಲ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು.
ಈ ಎಲ್ಲ ಸವಾಲಿನ ನಡುವೆ ಮಾರ್ಚ್ 7ರಂದು ವೈದ್ಯರ ತಂಡವು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ 6 ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಸಹ ಮಾಡಲಾಯಿತು. ಡಾ.ರವಿಮೋಹನ್, ಡಾ.ಸುನೀಲ್ ಶೇನ್ವಿ, ಡಾ.ಮನೀಶ್ ಜೋಶಿ, ಡಾ.ಮಿಚುವಲ್, ಡಾ.ಮಾಧವಿ, ಡಾ.ಅಮೇಯ ಮತ್ತು ಡಾ.ಎನ್.ಎಸ್.ಚಂದ್ರಶೇಖರ್ ವೈದ್ಯಕೀಯ ತಜ್ಞರು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.
ಇದನ್ನೂ ಓದಿ: Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್ ಗುಂಡೂರಾವ್? ಸೀರೆ ನೀಡಿ ಮಹಿಳೆಯರ ಕಿಡಿ
ಇನ್ನು ಯಶಸ್ವಿಯಾಗಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಟ್ರಸ್ಟ್ ವೆಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ. ಮಧುಸೂದನ್, ಇದು ನಮ್ಮ ಶಸ್ತ್ರಚಿಕಿತ್ಸಕ ತಂಡದ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಎಲ್ಲ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತೇವೆ ಎಂದರು. ಯಕೃತ್ತಿನ ಕಸಿಯು ಜೀವ ಉಳಿಸುವ ವಿಧಾನವಾಗಿದ್ದು, ಇದು ರೋಗಿಗಳಿಗೆ ಹೊಸ ಜೀವನವನ್ನು ಕಟ್ಟಿಕೊಟ್ಟಂತೆ ಆಗುತ್ತದೆ. ಯಶಸ್ವಿ ಫಲಿತಾಂಶವನ್ನು ಪಡೆಯಲು ನುರಿತ ವೈದ್ಯರ ತಂಡದ ಅಗತ್ಯವಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ