Site icon Vistara News

LK Ateeq : ನರೇಗಾ ಯಶಸ್ಸಿನ ರೂವಾರಿ ಎಲ್‌.ಕೆ ಅತೀಕ್‌ ಈಗ ಸಿಎಂ ಅಪರ ಮುಖ್ಯ ಕಾರ್ಯದರ್ಶಿ

LK Ateeq Additional Chief secretary to CM

ಬೆಂಗಳೂರು: ರಾಜ್ಯದಲ್ಲಿ ನರೇಗಾ ಯೋಜನೆಯನ್ನು ತಳಮಟ್ಟದಲ್ಲಿ ಯಶಸ್ವಿಯಾಗುವಂತೆ ನೋಡಿಕೊಂಡು ಮನೆ ಮಾತಾಗಿದ್ದ ಹಿರಿಯ ಅಧಿಕಾರಿ ಎಲ್.ಕೆ ಅತೀಕ್‌ (LK Ateeq) ಅವರನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ (Additional Chief secretary to CM) ನೇಮಕ ಮಾಡಲಾಗಿದೆ.

ಈ ಹಿಂದೆ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಜನೀಶ್‌ ಗೋಯಲ್‌ (Dr Rajaneesh Goel) ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ (Chief Secretary) ನೇಮಕಗೊಂಡಿದ್ದಾರೆ. ವಂದಿತಾ ಶರ್ಮ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಜನೀಶ್‌ ಗೋಯಲ್‌ ನೇಮಕಗೊಂಡಿದ್ದಾರೆ. ಇದೀಗ ರಜನೀಶ್‌ ಗೋಯಲ್‌ ಅವರಿಂದ ತೆರವಾದ ಸ್ಥಾನಕ್ಕೆ ಎಲ್‌.ಕೆ. ಅತೀಕ್‌ ಅವರನ್ನು ನೇಮಕ ಮಾಢಳಾಗಿದೆ.

ಎಲ್‌.ಕೆ. ಅತೀಕ್‌ ಅವರು ಸದ್ಯಕ್ಕೆ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯ ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದಾರೆ. ಈಗ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯ ಜತೆಗೆ ಹೆಚ್ಚುವರಿಯಾಗಿ ಹಣಕಾಸು ಇಲಾಖೆಯ ಹೆಚ್ಚುವರಿ ಪ್ರಭಾರವನ್ನೂ ಅವರಿಗೆ ವಹಿಸಲಾಗಿದೆ. ನವೆಂಬರ್‌ 30ರಂದು ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್‌ ಗೋಯಲ್‌ ಅಧಿಕಾರ ವಹಿಸಿಕೊಳ್ಳಲಿದ್ದು, ಅದರ ಆಸುಪಾಸಿನಲ್ಲೇ ಎಲ್‌.ಕೆ. ಅತೀಕ್‌ ಅವರು ಕೂಡಾ ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಗ್ರಾಮಾಭಿವೃದ್ಧಿ ಯೋಜನೆ ಯಶಸ್ಸಿನ ರೂವಾರಿ

ಎಲ್‌.ಕೆ. ಅತೀಕ್‌ ಅಂದರೆ ಲುತಾಫುಲ್ಲಾ ಖಾನ್‌ ಅತೀಕ್‌ ಅವರು ಮೂಲತಃ ತುಮಕೂರು ಜಿಲ್ಲೆ ಪಾವಗಡದವರು. ಅವರು ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಯಾಗುವ ಮುನ್ನ ಅವರು ಕರ್ನಾಟಕದಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ಅವರು ನರೇಗಾ ಯೋಜನೆಯ ಸಫಲಗೊಳಿಸುವ ನಿಟ್ಟಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅದರಲ್ಲೂ ಕೊರೊನಾ ಕಾಲದಲ್ಲಿ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅವರು ಹಲವು ಯೋಜನೆಗಳನ್ನು ರೂಪಿಸಿದ್ದರು.

ಎಲ್‌.ಕೆ. ಅತೀಕ್‌ ಅವರು 1991ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಆರಂಭದಲ್ಲಿ ಮಂಗಳೂರು ಎಸಿಯಾಗಿ ವೃತ್ತಿ ಬದುಕು ಆರಂಭಿಸಿದ ಅತೀಕ್‌ ಅವರು ಮಂಡ್ಯ, ಹಾಸನದ ಜಿಲ್ಲಾಧಿಕಾರಿಯಾಗಿದ್ದರು.

ಸರ್ವ ಶಿಕ್ಷಾ ಅಭಿಯಾನದ ಯೋಜನಾ ನಿರ್ದೇಶಕರಾಗಿದ್ದ ಅತೀಕ್‌ ಅವರು, ಕೇಂದ್ರ ಸರ್ಕಾರದ ಸೇವೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದರು. ವಿಶ್ವ ಬ್ಯಾಂಕ್‌ ಕಾರ್ಯ ನಿರ್ವಾಹಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವವೂ ಅವರಿಗಿದೆ. 2025ರ ಜನವರಿಯಲ್ಲಿ ನಿವೃತ್ತರಾಗಲಿರುವ ಅತೀಕ್‌ ಅವರು ಮುಖ್ಯಮಂತ್ರಿಗಳಿಗೆ ಆಪ್ತವಾಗಿ ಕೆಲಸ ಮಾಡಲಿದ್ದಾರೆ.

Exit mobile version