ತುಮಕೂರು/ ಚಿಕ್ಕಮಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಾಲ್ತಿಯಲ್ಲಿರುವ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ (Load shedding) ಇನ್ನು ಮುಂದೆ ಅಧಿಕೃತವಾಗಿ ಮುಂದುವರಿಯಲಿದೆ. ಈಗಿನ ಸ್ಥಿತಿಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ರಾಜ್ಯದ ಇಬ್ಬರು ಇಬ್ಬರು ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಸಚಿವ ಜಿ. ಪರಮೇಶ್ವರ್ (G Parameshwar) ಅವರು ತುಮಕೂರಿನಲ್ಲಿ ಮತ್ತು ಇಂಧನ ಸಚಿವ ಕೆ.ಜೆ ಜಾರ್ಜ್ (Power Minister KJ George) ಅವರು ಚಿಕ್ಕಮಗಳೂರಿನಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಸಚಿವ ಜಿ ಪರಮೇಶ್ವರ್ ಅವರು ತುಮಕೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ (Independence day) ಕಾರ್ಯಕ್ರಮದಲ್ಲಿ ಹೇಳಿದರು. ಮಳೆ ಕೊರತೆಯಿಂದ (Rain scarcity) ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮವಾಗಿದೆ, ಬೇಡಿಕೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜಲವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡುವ ಮೂಲಕವೇ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಬೇಕಾಗಿದೆ ಎಂದರು.
31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 11 ರ ಹೊತ್ತಿಗೆ ಸಾಮಾನ್ಯ ಮಳೆಯಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಕಡಿಮೆ ನೀರಿದೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಆಗಸ್ಟ್ 11 ರ ಹೊತ್ತಿಗೆ ಅವುಗಳ ಪೂರ್ಣ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟು ನೀರು ಇದೆ ಎಂದು ಅಂಕಿಅಂಶಗಳು ತಿಳಿಸಿವೆ ಎಂದು ಅವರು ವಿವರಿಸಿದರು.
ಚಿಕ್ಕಮಗಳೂರಿನಲ್ಲಿ ಕೆ.ಜೆ ಜಾರ್ಜ್ ಹೇಳಿದ್ದೇನು?
ಮಳೆ ಕಡಿಮೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆ ಕಡಿತವಾಗಿದೆ. ಮಳೆಗಾಲದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸರ್ವಿಸ್ ಕೆಲಸಗಳನ್ನು ನಿರ್ವಹಿಸುತ್ತಾರೆ. ಹೀಗಾಗಿ ಅಲ್ಲೂ ಉತ್ಪಾದನೆ ನಿಂತಿದೆ. ಹೀಗಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಈಗ ವಿದ್ಯುತ್ ಕೊರತೆಯನ್ನು ನಿರ್ವಹಿಸಲು ಉಷ್ಣ ವಿದ್ಯುತ್ ಸ್ಥಾವರಗಳನ್ನು ಆಪರೇಟ್ ಮಾಡಲು ಸೂಚಿಸಿದ್ದೇವೆ. ಮುಂದಿನ ಹತ್ತು ದಿನದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ವಹಣೆ ಕೆಲಸ ಮುಗಿಸಿ ಉತ್ಪಾದನೆ ಆರಂಭಿಸಲಾಗುತ್ತದೆ ಎಂದು ಜಾರ್ಜ್ ತಿಳಿಸಿದರು.
ಉಷ್ಣ ವಿದ್ಯುತ್ ಸ್ಥಾವರಗಳ ಸಮಸ್ಯೆಯನ್ನು ವಿವರಿಸಿದ ಅವರು, ʻʻನಮ್ಮ ಕಲ್ಲಿದ್ದಲು ಕ್ವಾಲಿಟಿ ಅಷ್ಟು ಸಾಕಾಗುವುದಿಲ್ಲ. ಆಮದು ಮಾಡಿಕೊಂಡ ಕಲ್ಲಿದ್ದಲಿನ ಜೊತೆ ಮಿಕ್ಸ್ ಮಾಡಬೇಕು. ಅದರ ಜತೆಗೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ರೈಲಿನಲ್ಲಿ ಬರುವಾಗ ಕಲ್ಲಿದ್ದಲು ಒದ್ದೆಯಾಗಿದೆ. ಅದನ್ನೂ ಒಣಗಿಸಬೇಕಾದ ಅನಿವಾರ್ಯತೆ ಇದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಹೆಚ್ಚಾಗಿ ಸೌರಶಕ್ತಿಯನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ನಾವು ಸ್ವಲ್ಪ ಅದೃಷ್ಟವಂತರು. ಮುಂದಿನ ದಿನಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು ಸಚಿವ ಜಾರ್ಜ್.
ಇದನ್ನೂ ಓದಿ: CT Ravi : ಸಿ.ಟಿ. ರವಿ ಶಾರಿಕ್‌ನನ್ನೂ ಮೀರಿಸಿದ ರಾಜಕೀಯ ಉಗ್ರ: ಸಚಿನ್ ಮೀಗಾ