Site icon Vistara News

Lockup Death | ಪೊಲೀಸ್ ಠಾಣೆಗೆ ಹೋದವ ಹೆಣವಾಗಿ ಪತ್ತೆ; ಪೊಲೀಸರ ವಿರುದ್ಧ ಲಾಕಪ್‌ ಡೆತ್‌ ಆರೋಪ

Lockup Death

ತುಮಕೂರು: ಸೈಕಲ್‌ ಕದ್ದ ಆರೋಪದಲ್ಲಿ ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಹೋಗಿದ್ದ ಗಾರೆ ಕೆಲಸಗಾರ ಶವವಾಗಿ ರಸ್ತೆಯಲ್ಲಿ ಪತ್ತೆಯಾಗಿದ್ದಾನೆ. ಆದರೆ, ಪೊಲೀಸರೇ ಕಿರುಕುಳ ನೀಡಿ ಹಲ್ಲೆ ಮಾಡಿದ್ದರಿಂದ ಆರೋಪಿ ಠಾಣೆಯಲ್ಲಿ (Lockup Death) ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಸಂಬಂಧಿಕರು ಹಾಗೂ ಸ್ಥಳೀಯರು, ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಶೆಟ್ಟಿಹಳ್ಳಿ ವೃತ್ತದ ಬಳಿಯ ನಾಯಕರಬೀದಿ ನಿವಾಸಿಯಾದ ಹನುಮಂತರಾಯಪ್ಪ (58) ಮೃತ ವ್ಯಕ್ತಿ. ಈತ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸೈಕಲ್ ಕಳ್ಳತನ ವಿಚಾರಕ್ಕೆ ಈತನ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೈಕಲ್ ಕದ್ದಿರುವ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿತ್ತು. ಈ ಸಂಬಂಧ ಹನುಮಂತರಾಯಪ್ಪನನ್ನು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಠಾಣೆಗೆ ಕರೆದೊಯ್ದಿದ್ದ ಜಯನಗರ ಪೊಲೀಸರು, ಮಧ್ಯರಾತ್ರಿ 12.30ರ ಸುಮಾರಿಗೆ ಬಿಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಭಾನುವಾರ ಮತ್ತೆ ವಿಚಾರಣೆ ನೆಪದಲ್ಲಿ ಸಂಜೆ 6 ಗಂಟೆಗೆ ಬಂದ ಇಬ್ಬರು ಪೊಲೀಸರು, ಬೈಕ್‌ನಲ್ಲಿ ಹನುಮಂತರಾಯಪ್ಪನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಂಜೆ 6.30ರ ವೇಳೆಗೆ ಪುನಃ ವಾಪಸ್ ಕರೆತಂದು ಶೆಟ್ಟಿಹಳ್ಳಿ ಸರ್ಕಲ್ ಬಳಿ ಬಿಟ್ಟು ಹೋಗಿದ್ದಾರೆ. ಆದರೆ ಕುಟುಂಬಸ್ಥರು ಬಂದು ನೋಡುವ ಹೊತ್ತಿಗೆ ಹನುಮಂತರಾಯಪ್ಪ ಮೃತಪಟ್ಟಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ | Murder case | ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ?; ಉದ್ಯಮಿ ಪುತ್ರನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

ವಾಪಸ್ ಕರೆತರುವಾಗಲೇ ಹನುಮಂತಪ್ಪ ಕುಸಿದು ಬಿದ್ದಿದ್ದ ಎನ್ನಲಾಗಿದೆ. ಇದನ್ನು ನೋಡಿದ್ದ ಹನುಮಂತರಾಯಪ್ಪನ ಬಾಮೈದ ಮೋಹನ್ ಪ್ರಶ್ನೆ ಮಾಡಿದ್ದಕ್ಕೆ, ಯಾಕೋ ಸುಸ್ತಾಗಿದ್ದಾನೆ ಎಂದು ಹೇಳಿ ರಸ್ತೆಬದಿಯೇ ಬಿಟ್ಟು ಪೊಲೀಸರು ಕಾಲ್ಕಿತಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರೇ ಕಿರುಕುಳ ಕೊಟ್ಟು, ಹಲ್ಲೆ ಮಾಡಿ ಈತನ ಸಾವಿಗೆ ಕಾರಣವಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೃತದೇಹ ರಸ್ತೆ ಬದಿ ಪತ್ತೆಯಾಗಿದ್ದು, ಕೈ, ಕಾಲು ಮತ್ತು ಇತರ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ. ಜಯನಗರ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಸರ್ಕಲ್‌ನಲ್ಲಿಯೇ ಶವ ಪತ್ತೆಯಾಗಿ ಮೂರು ಗಂಟೆಯಾದರೂ ಸ್ಥಳಕ್ಕೆ ಒಬ್ಬರೇ ಒಬ್ಬ ಪೊಲೀಸರು ಭೇಟಿ ನೀಡಿರಲಿಲ್ಲ. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ ಉದೇಶ್ ಭೇಟಿ ನೀಡಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದವರನ್ನು ಮನವೊಲಿಸಿ, ಮೃತನ ಕುಟುಂಬದವರ ಬಳಿ ದೂರು ಪಡೆದು ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರು. ಬಳಿಕ ಹನುಮಂತರಾಯಪ್ಪ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿಸಿದ್ದಾರೆ.

ಜಯನಗರ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದರಿಂದ ಕುಟುಂಬಸ್ಥರು ಅಧಿಕೃತವಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಿರಿಯ ಅಧಿಕಾರಿಗಳು, ಹನುಮಂತರಾಯಪ್ಪ ಅವರದ್ದು ಲಾಕಪ್ ಡೆತ್ ಪ್ರಕರಣವೇ ಅಥವಾ ಬೇರೆ ಕಾರಣಕ್ಕೆ ಪ್ರಾಣ ಬಿಟ್ಟರಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Murder sketch reopened | ಶಾಸಕ ಎಸ್‌.ಆರ್‌. ವಿಶ್ವನಾಥ್‌ ಕೊಲೆ ಯತ್ನ ಪ್ರಕರಣಕ್ಕೆ ಮರುಜೀವ

Exit mobile version