ಬೆಂಗಳೂರು: ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರ್ನಾಟಕಕ್ಕೆ ಬಂದಿದ್ದು, ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತಮ್ಮದೇ ರಣತಂತ್ರವನ್ನು ಹೆಣೆಯುತ್ತಿದ್ದಾರೆ. ಈ ವೇಳೆ ಶತಾಯ ಗತಾಯ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಮೈತ್ರಿ ಮೂಲಕ ಗೆದ್ದುಕೊಳ್ಳಬೇಕು ಎಂದು ಪಣ ತೊಟ್ಟಿರುವ ಅವರು ಈ ಸಂಬಂಧ ಹಲವು ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದಾರೆ. ಅಲ್ಲದೆ, ಕೊಡಗು – ಮೈಸೂರು ಲೋಕಸಭಾ ಕ್ಷೇತ್ರ (Kodagu – Mysore Lok Sabha constituency) ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು (Chamarajanagara constituency) ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಸಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಜತೆ ಪ್ರತ್ಯೇಕವಾಗಿ ಮಾತುಕತೆಯನ್ನು ನಡೆಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತವರಿನಲ್ಲಿ ಚೆಕ್ಮೇಟ್ ಕೊಡಲು ಸಿದ್ಧತೆಯನ್ನು ನಡೆಸಲಾಗಿದೆ.
ಕೊಡುಗು – ಮೈಸೂರು ಲೋಕಸಭಾ ಕ್ಷೇತ್ರವು ಸಿಎಂಗೆ ಪ್ರತಿಷ್ಠೆಯಾಗಿದೆ. ಕಾರಣ, ಮೈಸೂರು ಅವರ ತವರು ಜಿಲ್ಲೆಯಾಗಿದೆ. ಹೀಗಾಗಿ ಪದೇ ಪದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಯಕರ ವಿರುದ್ಧ ಆರೋಪ ಮಾಡುತ್ತಲೇ ಬಂದಿರುವ ಸಿಎಂ ಸಿದ್ದರಾಮಯ್ಯಗೆ (CM Siddaramaiah) ತವರಲ್ಲೇ ಆಘಾತ ಕೊಡಲು ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏನೇನು ಮಾಡಬೇಕು ಎಂದು ಅಮಿತ್ ಶಾ ಕೆಲವು ಸೂಚನೆಗಳನ್ನು ಈಗಾಗಲೇ ನೀಡಿದ್ದಾರೆನ್ನಲಾಗಿದೆ.
ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಭೋಸ್ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ಪ್ಲಸ್ ಮೈನಸ್‌ಗಳ ಬಗ್ಗೆ ಲೆಕ್ಕಾಚಾರಗಳನ್ನು ಹಾಕಿದ್ದಾರೆ. ಆ ಭಾಗದಲ್ಲಿ ಬಿಜೆಪಿ ಪ್ರಚಾರ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಅಭ್ಯರ್ಥಿ ಗೆಲುವಿಗೆ ವಿಶೇಷ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಅಮಿತ್ ಶಾ ಇದೇ ವೇಳೆ ಸೂಚನೆ ನೀಡಿದ್ದಾರೆ. ಸದ್ಯ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲರಾಜ್ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಾಲರಾಜ್ ಶಕ್ತಿ ಹೆಚ್ಚಿಸಲು ವಿಶೇಷವಾದ ಪ್ಲ್ಯಾನ್ ಮಾಡಬೇಕು. ಕೇಂದ್ರದ ಯೋಜನೆಗಳ ಬಗ್ಗೆ, ಮುಂದಿನ ಗುರಿಗಳ ಬಗ್ಗೆ ಜನರಿಗೆ ಸ್ಪಷ್ಟವಾಗಿ ತಿಳಿಸಿ ಹೇಳುವ ಕೆಲಸ ಆಗಬೇಕು ಎಂದು ಅಮಿತ್ ಸೂಚನೆಯನ್ನು ನೀಡಿದ್ದಾರೆನ್ನಲಾಗಿದೆ.
ಇದರ ಜತೆಗೆ ಮೈಸೂರು ಲೋಕಸಭಾ ಕ್ಷೇತ್ರದ ಪರಿಸ್ಥಿತಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಯದುವೀರ್ ಒಡೆಯರ್ ಆಯ್ಕೆಯಿಂದ ಪಕ್ಷದೊಳಿಗಿನ ಅಭಿಪ್ರಾಯ ಹೇಗಿದೆ? ಜನಾಭಿಪ್ರಾಯ ಯಾವ ರೀತಿ ಇದೆ? ಯದುವೀರ್ ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದು, ಜನರಿಂದ ಯಾವ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮೈಸೂರು ಗೆಲ್ಲಲು ಯಾವ ರೀತಿ ಪ್ಲ್ಯಾನ್ ಮಾಡಿಕೊಳ್ಳಬೇಕು. ಅಲ್ಲದೆ, ಒಕ್ಕಲಿಗ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವವನ್ನು ಹೇಗೆ ಬಳಸಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನು ಸೂಚಿಸಿದ್ದಾರೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಾಜ್ ವೆಸ್ಟೆಂಡ್‌ನಲ್ಲಿ ಶಾ ನೇತೃತ್ವದಲ್ಲಿ ಸಭೆ
ಇನ್ನು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ಬಿಜೆಪಿ – ಜೆಡಿಎಸ್ ಮುಖಂಡರ ಸಭೆಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಒಟ್ಟು 12 ಲೋಕಸಭಾ ಕ್ಷೇತ್ರಗಳನ್ನು ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ವೀಕ್ ಇರುವ ಕ್ಷೇತ್ರಗಳಲ್ಲಿಯೂ ಗೆಲುವು ಪಡೆಯಬೇಕು. ಅಲ್ಲದೆ, ಕಳೆದ ಬಾರಿ ಗೆದ್ದುಕೊಂಡಿರುವ ಯಾವ ಕ್ಷೇತ್ರವನ್ನೂ ಬಿಟ್ಟುಕೊಡಬಾರದು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿಯೂ ಮೈತ್ರಿ ಬಾವುಟ ಹಾರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು.
ಸಿಎಂ, ಡಿಸಿಎಂಗೆ ಚೆಕ್‌ಮೇಟ್ ಕೊಡಲು ಪ್ಲ್ಯಾನ್!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತವರು ಕ್ಷೇತ್ರಗಳಲ್ಲಿ ಚೆಕ್‌ಮೇಟ್ ಕೊಡಲು ಅಮಿತ್ ಶಾ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಗೆಲುವಿನ ಬಗ್ಗೆ ರಣತಂತ್ರವನ್ನು ಇಲ್ಲಿ ಹೆಣೆಯಲಾಗುತ್ತದೆ. ಸಿದ್ದರಾಮಯ್ಯ, ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಬರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಗೆಲುವು ಪಡೆಯಲು ಚುನಾವಣಾ ಚಾಣಕ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಇಂದು ರಾಜ್ಯದಲ್ಲಿ ಅಮಿತ್ ಶಾ ಬಿರುಗಾಳಿ ಪ್ರಚಾರ; ಸುಮಲತಾ ಮನ ಒಲಿಸ್ತಾರ?
12 ಕ್ಷೇತ್ರಗಳ ಕ್ಲಿನ್ ಸ್ವೀಪ್ ಮಾಡಬೇಕೆಂದರೆ ಬೂತ್ ಮಟ್ಟದಲ್ಲಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಒಟ್ಟಾಗಬೇಕು. ಇವರು ಒಟ್ಟಾದಲ್ಲಿ ಕಾಂಗ್ರೆಸ್ ಪ್ರಬಲ ಇರುವ ಕ್ಷೇತ್ರಗಳಲ್ಲಿಯೂ ಆ ಪಕ್ಷವನ್ನು ಕಟ್ಟಿ ಹಾಕಬಹುದು ಎಂಬ ನಿಟ್ಟಿನಲ್ಲಿ ಮೈತ್ರಿ ನಾಯಕರು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರು ಒಂದಾಗಲು ಮಾಡಬೇಕಾದ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ.
ಅಲ್ಲದೆ, ಈ ಸಭೆಯಲ್ಲಿ ತಮ್ಮ ಬಲ ಭಾಗದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಡಭಾಗದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂರುವಂತೆ ಅಮಿತ್ ಶಾ ಸೂಚಿಸಿದ್ದು, ಇಬ್ಬರಿಗೂ ಪ್ರಧಾನ ಆದ್ಯತೆಯನ್ನು ನೀಡಿದ್ದಾರೆ.
ಎಚ್‌ಡಿಕೆ ಆರೋಗ್ಯ ವಿಚಾರಿಸಿದ ಅಮಿತ್ ಶಾ
ಅಮಿತ್ ಶಾ ಅವರು ತಾಜ್ ವೆಸ್ಟೆಂಡ್‌ಗೆ ಆಗಮಿಸುತ್ತಿದ್ದಂತೆ ಅವರನ್ನು ಬರಮಾಡಿಕೊಳ್ಳಲು ಮುಂದಾದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ, “How Are You ಕುಮಾರಸ್ವಾಮಿ? ಹೇಗಿದೆ ಹೆಲ್ತ್..!” ಎಂದು ಕೇಳಿದ ಶಾ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, “ಆರೋಗ್ಯ ಚೆನ್ನಾಗಿದೆ, ಫೈನ್” ಎಂದು ಹೇಳಿದರು.