Site icon Vistara News

Lok Sabha Election 2024: ಬೆಳಗಾವಿಯಲ್ಲಿ ಸಂಸದೆ ಮಂಗಳಾ ಅಂಗಡಿಗೆ ಬಿಜೆಪಿ ಟಿಕೆಟ್ ಮಿಸ್; ಜಗದೀಶ್ ಶೆಟ್ಟರ್‌ಗೆ ಮಣೆ

Mangala Angadi and Jagadish Shettar

ಬೆಳಗಾವಿ: ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election 2024) ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಅವರ ಬದಲಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಪಕ್ಷ ಮಣೆ ಹಾಕಿದೆ. ಈ ಬಗ್ಗೆ ಮಂಗಳಾ ಅಂಗಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರೆ ಮಾಡಿ ಮನವರಿಕೆ ಮಾಡಿದ್ದಾರೆ.

ಟಿಕೆಟ್‌ ಬಗ್ಗೆ ಮಂಗಳಾ ಅಂಗಡಿ ಅವರ ಜತೆ ಚರ್ಚಿಸಿರುವ ಜೆಪಿ ನಡ್ಡಾ ಅವರು, ಪಕ್ಷದ ಜತೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಂಸದೆ ಮಂಗಳಾ ಅಂಗಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿಂದೆ ಬೆಳಗಾವಿಗೆ ಜೆಪಿ ನಡ್ಡಾ ಬಂದಾಗ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಿ ಎಂದು ಮಂಗಳಾ ಅಂಗಡಿ ಮನವಿ ಮಾಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಮಿಸ್‌ ಆಗಿ ಕಾಂಗ್ರೆಸ್‌ಗೆ ಹೋಗಿದ್ದ ಶೆಟ್ಟರ್‌ ಅವರು ಮರಳಿ ಬಿಜೆಪಿ ಸೇರಿರುವುದರಿಂದ ಅವರನ್ನು ಸಮಾಧಾನಪಡಿಸಲು ಟಿಕೆಟ್‌ ನೀಡಲಾಗಿದೆ.

ಬೆಳಗಾವಿಗೆ ಜೆಪಿ ನಡ್ಡಾ ಅವರು ಬಂದಿದ್ದಾಗ, ಅಥವಾ ಪುತ್ರಿ ಶ್ರದ್ಧಾ ಶೆಟ್ಟರ್‌ಗೆ ಟಿಕೆಟ್‌ ನೀಡುವಂತೆ ಮಂಗಳಾ ಅಂಗಡಿ ಮನವಿ ಮಾಡಿದ್ದರು. ಶ್ರದ್ಧಾ ಶೆಟ್ಟರ್‌ ಜಗದೀಶ್‌ ಶೆಟ್ಟರ್‌ ಅವರ ಸೊಸೆಯಾಗಿದ್ದಾರೆ. ಆದರೆ, ಮಾಜಿ ಸಿಎಂ ಶೆಟ್ಟರ್ ಕೂಡ ಟಿಕೆಟ್‌ ಆಕಾಂಕ್ಷಿಯಾಗಿರುವುದರಿಂದ ಎರಡೂ ಕುಟುಂಬಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೈಕಮಾಂಡ್ ಇಂತಹ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ | BJP Candidates List: ಕಾಗೇರಿ, ಶೆಟ್ಟರ್‌, ಸುಧಾಕರ್‌, ಅಮರೇಶ್ವರ್‌ ನಾಯಕ್‌ಗೆ ಬಿಜೆಪಿ ಟಿಕೆಟ್‌

ಸುರೇಶ್ ಅಂಗಡಿ ಕುಟುಂಬದ ಬೀಗರಾಗಿರುವ ಶೆಟ್ಟರ್‌ ಪಕ್ಷದ ಮಣೆ ಹಾಕುವ ಮೂಲಕ ಶೆಟ್ಟರ್ ಮತ್ತು ಅಂಗಡಿ ಕುಟುಂಬಗಳೆರಡನ್ನೂ ಸಮಾಧಾನ ಪಡಿಸುವ ಯತ್ನ ನಡೆದಿದೆ. ಇದರಿಂದ ಬೆಳಗಾವಿಯಲ್ಲಿ 20 ವರ್ಷಗಳ ಅಂಗಡಿ ಕುಟುಂಬದ ಪಾರುಪತ್ಯ ಅಂತ್ಯವಾಗಿದೆ. ಕ್ಷೇತ್ರದಲ್ಲಿ 2004 ರಿಂದ ಸತತ ನಾಲ್ಕು ಬಾರಿ ಸುರೇಶ ಅಂಗಡಿ, ಒಂದು ಸಲ ಮಂಗಳಾ ಅಂಗಡಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಶೆಟ್ಟರ್‌ ವಿರುದ್ಧ ಗೋ ಬ್ಯಾಕ್‌ ಅಭಿಯಾನ

ಬೆಳಗಾವಿಗೆ ಹೊರಗಿನವರು ಬರುವುದು ಬೇಡ. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬೇಕು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಜಗದೀಶ್ ಶೆಟ್ಟರ್‌ ವಿರುದ್ಧ ಗೋ ಬ್ಯಾಗ್‌ ಶೆಟ್ಟರ್ ಅಭಿಯಾನ ನಡೆಸಿದ್ದರು. ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ತೆರಳಿದ್ದರು. ಕಾಂಗ್ರೆಸ್‌ಗೆ ಹೋಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, ಲೋಕಸಭಾ ಚುನಾವಣೆ ವೇಳೆಗೆ ಪುನಃ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್‌ ನೀಡೋದು ಬೇಡ, ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಜಗದೀಶ್‌ ಶೆಟ್ಟರ್‌ಗೇ ಪಕ್ಷ ಮಣೆ ಹಾಕಿದೆ.

Exit mobile version