Site icon Vistara News

Lok Sabha Election 2024: ಬೀದರ್ ಕೈ ಅಭ್ಯರ್ಥಿ ಸಾಗರ್ ಖಂಡ್ರೆ 13.12 ಕೋಟಿ ಆಸ್ತಿ ಒಡೆಯ

ಬೀದರ್: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಖಂಡ್ರೆ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಒಟ್ಟು 13.12 ಕೋಟಿ ಒಡೆಯರಾಗಿದ್ದು, ಈ ಬಗ್ಗೆ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸಾಗರ್ ಖಂಡ್ರೆ ಅವರು 13.12 ಕೋಟಿ ಒಡೆಯರಾದರೂ ಒಂದೂ ಸ್ವಂತ ವಾಹನ ಹೊಂದಿಲ್ಲ. ಕೈಯಲ್ಲಿ 2.50 ಲಕ್ಷ ನಗದು ಇದ್ದು, ಇವರ ಒಟ್ಟು ಚರಾಸ್ತಿ ಮೌಲ್ಯ 57.26 ಲಕ್ಷವಾಗಿದೆ. ಒಟ್ಟು ಸ್ಥಿರಾಸ್ತಿ ಮೌಲ್ಯ 12.86 ಕೋಟಿ ಆಗಿದ್ದು, 28 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 1.50 ಕೋಟಿ ಸಾಲ ಹೊಂದಿರೋ ಸಾಗರ್ ಖಂಡ್ರೆ, ಇದುವರೆಗೇ ಇವರ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ.

ಚುನಾವಣಾಧಿಕಾರಿ ಗೋವಿಂದ್ ರೆಡ್ಡಿಗೆ ಸಾಗರ್‌ ಖಂಡ್ರೆ ಅವರು ಉಮೇದುವಾರಿಕೆ ಸಲ್ಲಿಸಿದರು. ಅವರಿಗೆ ತಂದೆ ಈಶ್ವರ್ ಖಂಡ್ರೆ, ಸಚಿವ ರಹೀಂ ಖಾನ್, ಮಾಜಿ ಶಾಸಕ ಅಶೋಕ್ ಖೇಣಿ, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬಿ ಫಾರ್ಮ್‌ಗೆ ಪೂಜೆ ಸಾಗರ್ ಖಂಡ್ರೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ | Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1.24 ಲಕ್ಷ ರೂ. ಜಮೆ: ರಾಹುಲ್‌ ಗಾಂಧಿ

ನಾಮಪತ್ರ ಸಲ್ಲಿಕೆ ನಂತರ ಬೃಹತ್‌ ರೋಡ್ ಶೋ ನಡೆಸಲಾಯಿತು. ನಂತರ ಬೃಹತ್‌ ಕಾಂಗ್ರೆಸ್‌ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಕಾಂಗ್ರೆಸ್‌ ಸೇರಿದ ಕರಡಿ ಸಂಗಣ್ಣ; ಪಕ್ಷ ಸೇರ್ಪಡೆಗೆ ಲಕ್ಷ್ಮಣ ಸವದಿ ಕಾರಣ!

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಸಂಸದ ಸಂಗಣ್ಣ ಕರಡಿ (Sanganna Karadi) ಅವರು ಲೋಕಸಭಾ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ (ಏಪ್ರಿಲ್‌ 16) ರಾಜಿನಾಮೆ ನೀಡಿದ ಬೆನ್ನಲ್ಲೇ, ಬುಧವಾರ (ಏಪ್ರಿಲ್‌ 17) ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ (Congress Karnataka) ಸೇರ್ಪಡೆಯಾಗಿದ್ದಾರೆ.

ಸಂಗಣ್ಣ ಕರಡಿ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಮುಖಂಡರಾದ ಲಕ್ಷ್ಮಣ ಸವದಿ, ಹಂಪನಗೌಡ ಬಾದರ್ಲಿ, ಬಸವಗೌಡ ತುರವಿಹಾಳ್, ರಾಘವೇಂದ್ರ ಹಿಟ್ನಲ್ ಇತರರು ಉಪಸ್ಥಿತರಿದ್ದರು.

ಬಿಜೆಪಿಯಲ್ಲಿ ಎರಡು ಬಣ: ಸಿಎಂ ಸಿದ್ದರಾಮಯ್ಯ

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಕರಡಿ ಸಂಗಣ್ಣ ಒಟ್ಟಿಗೆ ಕೆಲಸ ಮಾಡಿದ್ದೇವೆ. ಬೇರೆ ಪಕ್ಷದಲ್ಲಿ ಅವರು ಇದ್ದರೂ ನಮ್ಮ ನಡುವೆ ಸಂಬಂಧ ಚೆನ್ನಾಗಿದೆ. ಕ್ಷೇತ್ರದಲ್ಲಿ ಜನಾನುರಾಗಿ ಆಗಿದ್ದವರು. ಇವರಿಗೆ ಯಾಕೆ ಟಿಕೆಟ್ ತಪ್ಪಿಸಿದ್ದಾರೋ ಗೊತ್ತಿಲ್ಲ. ‌ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಸಿಎಂ ಮಾಡುವ ಸಂಬಂಧ ಹಿರಿಯರಿಗೆ ಟಿಕೆಟ್ ತಪ್ಪಿಸಿದ್ದಾರೆ. ಅಲ್ಲಿ ಯಡಿಯೂರಪ್ಪ ಮತ್ತು ಬಿ.ಎಲ್. ಸಂತೋಷ್ ಬಣಗಳಿವೆ.‌ ಸಂತೋಷ್ ಜತೆ ಇದ್ದವರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಹೇಳಿದರು.

ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಅಲೆ ಇದೆ. ಕಾಂಗ್ರೆಸ್ ಐದು ಗ್ಯಾರಂಟಿಗಳ ಅಲೆ ಇದೆ. ಕಾಂಗ್ರೆಸ್ ಮೇಲೆ ಜನರಿಗೆ ನಂಬಿಕೆಯಿದೆ. ದೇಶದಲ್ಲಿ ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ. 2014ರಲ್ಲಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯಲ್ಲಿ ಒಂದನ್ನೂ ಈಡೇರಿಸಿಲ್ಲ. ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರಗಳನ್ನು ಹೇಳಿ ಯಶಸ್ವಿಯಾಗಿದ್ದರು. ಈ ಬಾರಿ ಯಾವುದೇ ಕಾರಣಕ್ಕೂ ಅದು ವರ್ಕೌಟ್ ಆಗಲ್ಲ. ಬಿಜೆಪಿ ಸರ್ವೆಯಲ್ಲಿ 200 ಸ್ಥಾನ ಗೆಲ್ಲುವುದಾಗಿ ಬಂದಿದೆ. ಯಾವುದೇ ಕಾರಣಕ್ಕೂ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲ್ಲ. ಅಂಡರ್ ಕರೆಂಟ್ ಕಾಂಗ್ರೆಸ್ ಪರ ಇದೆ. ಜನ ಬಹಿರಂಗವಾಗಿ ಬಂದು ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.

ಸಂಗಣ್ಣ ಕರಡಿಯವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ. ಅವರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ಕೊಪ್ಪಳದಲ್ಲಿ ಶಕ್ತಿ ಬಂದಿದೆ. ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯನ್ನು ಕಸ ಗುಡಿಸಿದಂತೆ ಗುಡಿಸುತ್ತಾರೆ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಸಂಗಣ್ಣ ಕರಡಿಗೆ ಬಿಜೆಪಿಯವರು ಟಿಕೆಟ್ ತಪ್ಪಿಸಿದ್ದಾರೆ. ದೇಶದಲ್ಲಿ ಬಿಜೆಪಿ ವಿರೋಧ ಅಲೆಯಿದೆ. ಗ್ಯಾರಂಟಿ ಮುಂದುವರಿಸಲ್ಲ ಅಂತಿದ್ದಾರೆ. ಈ ಗ್ಯಾರಂಟಿಗಳನ್ನು ನೀವು ಮುಟ್ಟಲು ಸಾಧ್ಯವಿಲ್ಲ. ನಿಮ್ಮ ಹಣೆಬರಹದಲ್ಲಿ ಇದು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು. ನಮ್ಮ ತಾಯಂದಿರ ಬಗ್ಗೆ ನೀವು ಮಾತನಾಡಿದ್ದೀರಿ. ನಿಮಗೆ ಜನ ಬುದ್ಧಿ ಕಲಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಸ ಗುಡಿಸಿದಂತೆ ಗುಡಿಸುತ್ತಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಬೆಳಗಾವಿಯಲ್ಲಿ ಕಸಗುಡಿಸದಂತೆ ಗುಡಿಸಿದ್ದೇವೆ. ಈ ಬಾರಿ ಬಿಜೆಪಿಯನ್ನು ರಾಜ್ಯದಿಂದ ಗುಡಿಸುತ್ತಾರೆ ಎಂದು ಹೇಳಿದರು.

ಐದು ಬೆರಳು ಸೇರಿದರೆ ಮುಷ್ಟಿ, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿ ಮಾಡಿವೆ. ಮೊನ್ನೆ ನಾಮಪತ್ರ ಸಲ್ಲಿಕೆ ಮಾಡುವಾಗ ಸೇರಿದ ಜನರೇ ಇದಕ್ಕೆ ಸಾಕ್ಷಿ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರಿಗೂ ನಾನು ಹೇಳುವುದೆಂದರೆ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಗೆಲ್ಲುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ನಾನು ಕಾಂಗ್ರೆಸ್ ಸೇರಲು ಲಕ್ಷ್ಮಣ ಸವದಿ ಕಾರಣರು. ಅಂದು ಬಿಜೆಪಿ ಸೇರುವುದಕ್ಕೂ ಅವರೇ ಕಾರಣರಾಗಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ನನಗೆ ಗೊತ್ತಿರುವವರು. ಎರಡು ಜಿಲ್ಲೆಗಳ ಅಭಿವೃದ್ಧಿಗಾಗಿ ನಾನು ಪಕ್ಷ ಸೇರ್ಪಡೆ ಆಗುತ್ತಿದ್ದೇನೆ. ರಾಜಶೇಖರ ಹಿಟ್ನಾಲ್ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಹೊತ್ತಿದ್ದೇನೆ ಎಂದು ಹೇಳಿದರು.

Exit mobile version