ಮೈಸೂರು: ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪರೇಷನ್ ಹಸ್ತ ಯಶಸ್ವಿಯಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಸೇರಿ ಮೂವರು ನಾಯಕರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಇದೀಗ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಾಮರಾಜನಗರ ಅಭ್ಯರ್ಥಿ ಸುನೀಲ್ ಬೋಸ್ ಸಮ್ಮುಖದಲ್ಲಿ ಶನಿವಾರ ಸರಳವಾಗಿ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ ಧೀರಜ್ ಪ್ರಸಾದ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ತಂಗಿಯ ಮಗ.
ಇತ್ತೀಚೆಗೆ ಸಚಿವ ಎಚ್.ಸಿ.ಮಹದೇವಪ್ರಸಾದ್ ಸೇರಿ ಕಾಂಗ್ರೆಸ್ ಮುಖಂಡರು ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಈ ವೇಳೆ ನಿವೃತ್ತಿ ಘೋಷಿಸಿದ್ದೇನೆ, ನೋಡೋಣ ಎಂದಷ್ಟೇ ಸಂಸದ ಹೇಳಿದ್ದರು. ಇದರ ಬೆನ್ನಲ್ಲೇ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಂಡುಬಂದಿದೆ. ಇನ್ನು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್ ಕುಮಾರ್‌ಗೂ ಕಾಂಗ್ರೆಸ್ ಗಾಳ ಹಾಕಿದೆ.
ಇದನ್ನೂ ಓದಿ | Lok Sabha Election 2024: ಯತೀಂದ್ರ, ಸಿಎಂಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಪ್ರಲ್ಹಾದ್ ಜೋಶಿ ಪ್ರಶ್ನೆ
ಕಾಂಗ್ರೆಸ್ ಬೆಂಬಲಿಸುತ್ತಾರಾ ವಿ.ಶ್ರೀನಿವಾಸ ಪ್ರಸಾದ್?
ಚಾಮರಾಜನಗರ ಮೀಸಲು ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಶ್ರಿನಿವಾಸ್ ಪ್ರಸಾದ್ ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ತಮ್ಮ ಅಳಿಯನಿಗೆ ಬಿಜೆಪಿ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದ್ದರು, ಆದರೆ, ಅದು ವಿಫಲವಾಗಿದ್ದರಿಂದ ಪಕ್ಷದ ನಡೆಗೆ ಬೇಸರಗೊಂಡಿದ್ದರು. ಹೀಗಾಗಿ ಮಾತೃ ಪಕ್ಷಕ್ಕೆ ಶ್ರೀನಿವಾಸ್ ಪ್ರಸಾದ್‌ರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಇನ್ನು ತವರು ಜಿಲ್ಲೆ ಮೈಸೂರು ಮಾತ್ರವಲ್ಲದೆ, ಪಕ್ಕದ ಚಾಮರಾಜನಗರ ಕ್ಷೇತ್ರವನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಕಳೆದ ಬಾರಿ ಕೈ ತಪ್ಪಿತ್ತು. ಮತ್ತೆ ಕೈ ತೆಕ್ಕೆ ತೆಗೆದುಕೊಳ್ಳಲು ಸಿಎಂ ಚಿತ್ತ ನೆಟ್ಟಿದ್ದಾರೆ. ಖುದ್ದಾಗಿ ಸಿಎಂ ಸಿದ್ದರಾಮಯ್ಯ ಫೋನ್ ಮಾಡಿ ಶ್ರೀನಿವಾಸ್ ಪ್ರಸಾದ್ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಸದರ ಮುಂದಿನ ನಡೆ ಬಾರಿ ಕುತೂಹಲ ಕೆರಳಿಸಿದೆ.
ಹಳೆ ಮೈಸೂರು ಭಾಗದಲ್ಲಿ ದಲಿತ ಮತಗಳ ಕ್ರೋಡೀಕರಣಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಶ್ರೀನಿವಾಸ್ ಪ್ರಸಾದ್ ಬೆಂಬಲ ಸಿಕ್ಕರೆ ಕೈಗೆ ಮತ್ತಷ್ಟು ಶಕ್ತಿ ಬರಲಿದೆ. ಅಷ್ಟೇ ಅಲ್ಲದೆ ಕೈ ನಾಯಕರ ಬಗ್ಗೆ ಸಂಸದರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಕುಟುಂಬಸ್ಥರಿಗೆ ಸೂಕ್ತ ಸ್ಥಾನಮಾನ ಕೊಡುವುದಾಗಿ ಸಿಎಂ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಮಲ ಬಿಟ್ಟು ಕೈ ಕಡೆ ಹೋಗಲು ವಿ.ಶ್ರೀನಿವಾಸ್ ಪ್ರಸಾದ್ ಮನಸ್ಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.