ಕೋಲಾರ: ಲೋಕಸಭಾ ಚುನಾವಣೆಗೆ (Lok Sabha Election 2024) ಅಭ್ಯರ್ಥಿ ಘೋಷಣೆಯಾದರೂ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ನಿಂತಿಲ್ಲ. ಒಂದೆಡೆ ಇದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್‌ಗೆ ಬಿಸಿ ತುಪ್ಪವಾಗಿದ್ದರೆ, ಮತ್ತೊಂದೆಡೆ ಗುಂಪುಗಾರಿಕೆಯಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ಎಲ್ಲಡೆ ದಿನೇದಿನೇ ಚುನಾವಣೆ ಕಾವು ಏರುತ್ತಿದ್ದರೂ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಮಾತ್ರ ಹುರುಪು ಕಾಣದಿರುವುದಕ್ಕೆ ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನು ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಸರಿ ಮಾಡದ ರಾಜ್ಯ ನಾಯಕರ ವಿರುದ್ಧವೂ ಕಾರ್ಯಕರ್ತರು ಬೇಸರ ಹೊರಹಾಕುತ್ತಿದ್ದಾರೆ. ಕೋಲಾರದಲ್ಲಿ ಭಿನ್ನಮತ ಯಾಕೆ ಶಮನ ಮಾಡಿಲ್ಲ, ಕೋಲಾರ ಕಾಂಗ್ರೆಸ್ ಮೇಲೆ ಹೈಕಮಾಂಡ್‌ಗೆ ಒಲವು ಇಲ್ಲ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲದೆ ಮುಖಂಡರು, ಕಾಯರ್ಕರ್ತರು ಪಕ್ಷಾಂತರ ಆಗುತ್ತಿದ್ದಾರೆ ಎಂದು ಕಾಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣಗಳು ಒಂದಾಗದ ಹೊರತು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಷ್ಟ. ಎರಡು ಬಣದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಹಿರಿಯ ನಾಯಕರು ವಿಫಲರಾಗಿದ್ದಾರೆ. ಸಂಧಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಒಪ್ಪಿದರೂ ರಮೇಶ್ ಕುಮಾರ್ ಒಪ್ಪುತ್ತಿಲ್ಲ. ಮುನಿಯಪ್ಪನ ಕಡೆಗಣಿಸಿದರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಹಲವು ಪ್ರಚಾರ ಸಭೆಗಳಿಗೆ ಆಹ್ವಾನಿಸದೆ ಸಚಿವರನ್ನು ಕಡೆಗಣನೆ ಮಾಡಲಾಗಿದೆ ಎಂದು ಒಂದು ಬಣದ ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಗುಂಪುಗಾರಿಕೆಯಿಂದ ಕಾಂಗ್ರೆಸ್ ಸೋಲುವ ಸ್ಥಿತಿ: ಹಿರಿಯ ಕಾಂಗ್ರೆಸ್ ಮುಖಂಡ ಆನಂದರೆಡ್ಡಿ
ಈ ಬಣ ಬಡಿದಾಟದಿಂದ ಕಾಂಗ್ರೆಸ್ ಭದ್ರಕೋಟೆ ಕೋಲಾರದಲ್ಲಿ ಪಕ್ಷವು ಕಳಚುತ್ತಿದೆ. ಉತ್ಸಾಹಿ ಕಾರ್ಯಕರ್ತರನ್ನು ಒಗ್ಗೂಡಿಸುವ ನಾಯಕನಿಲ್ಲ. ಇನ್ನೂ ಕಾಲ ಮಿಂಚಿಲ್ಲ, ಮುನಿಸಿಕೊಂಡ ಮುಖಂಡರು ಒಂದಾಗದ ಹೊರತು ಕಾಂಗ್ರೆಸ್‌ಗೆ ನೆಲೆ ಇಲ್ಲ. ಎರಡು ಬಣಗಳು ಒಂದಾದರೆ ಪಕ್ಷಾಂತರವಾಗಿರುವ ಮುಖಂಡರು ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬುವುದು ಹಿರಿಯ ಕಾಂಗ್ರೆಸ್ ಮುಖಂಡ ಆನಂದರೆಡ್ಡಿ ಮನದಾಳದ ಮಾತಾಗಿದೆ.
ಇದನ್ನೂ ಓದಿ | Lok Sabha Election 2024: ಏಪ್ರಿಲ್ 17ಕ್ಕೆ ರಾಯಚೂರಲ್ಲಿ ಪವನ್ ಕಲ್ಯಾಣ್ ರೋಡ್ ಶೋ! ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲೂ ಹವಾ
ಕಳೆದ ಲೋಕಸಭೆ ಚುನಾವನಣೆಯಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದರೆ ಕೆ.ಎಚ್.ಮುನಿಯಪ್ಪ ಸುಲಭವಾಗಿ ಗೆಲ್ಲುತ್ತಿದ್ದರು. ಗುಂಪುಗಾರಿಕೆಯಿಂದ ಈಗಲೂ ಕಾಂಗ್ರೆಸ್ ಸೋಲುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ನಮ್ಮ ನಾಯಕರ ಹೊಡೆದಾಟದಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನೀವು ಹೀಗಿದ್ದರೆ ಆಗಲ್ಲ, ಒಟ್ಟಿಗೆ ಹೋಗಬೇಕು ಎಂದು ನಾಯಕರಿಗೆ ಹೇಳಲಾಗಿದೆ. ಆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾನು ಪಕ್ಷ ತೊರೆದಿದ್ದೇನೆ ಎಂದು ಆನಂದಗೌಡ ತಿಳಿಸಿದ್ದಾರೆ.
ಇದನ್ನೂ ಓದಿ | Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ
ಸಿಎಂ ಅಥವಾ ಡಿಸಿಎಂ ಅವರು ನಮ್ಮ ನಾಯಕರನ್ನು ಕರೆದು ಸಮಾಧಾನ ಮಾಡಬಹುದಿತ್ತು. ಎರಡು ಬಣಗಳ ಸಂಧಾನಕ್ಕೆ ಹೈಕಮಾಂಡ್ ಮುಂದಾಗಿಲ್ಲ. ಇದರಿಂದ ಪಕ್ಷದಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ. ಬೇರೆಡೆ ಭಿನ್ನಮತ ಶಮನಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಆ ಕೆಲಸವಾಗಿಲ್ಲ. ಇಲ್ಲಿನ ಸಮಸ್ಯೆ ಬಗೆಹರಿಸಲು ರಾಜ್ಯದ ಹಿರಿಯ ನಾಯಕರಿಗೆ ಮನಸ್ಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.