ಬೆಳಗಾವಿ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಬೇಸಿಗೆಯ ಬಿಸಿಲಿಗಿಂತ ಜಾಸ್ತಿಯಾಗುತ್ತಿದೆ. ಚುನಾವಣೆ ಕಣಕ್ಕಿಳಿದಿರುವ ಅಭ್ಯರ್ಥಿಗಳು, ನಾಯಕರು ಎದುರಾಳಿಗಳ ವಿರುದ್ಧ ಆರೋಪ, ವ್ಯಂಗ್ಯ, ಟೀಕೆಗಳು ಸೇರಿ ಹಲವು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಆದರೆ, ಬೆಳಗಾವಿಯಲ್ಲಿ (Belagavi) ಮಾತ್ರ ಲೋಕಸಭೆ ಚುನಾವಣೆಯ ಪೈಪೋಟಿಯು ರಾಜಕೀಯ ಹಿಂಸಾಚಾರಕ್ಕೆ ತಿರುಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರನ್ನು ನಡುರಸ್ತೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶಾಸಕ ಲಕ್ಷ್ಮಣ ಸವದಿ (Laxman Savadi) ಆಪ್ತ, ಸ್ಥಳೀಯ ಕಾಂಗ್ರೆಸ್ ಮುಖಂಡ ಅಣ್ಣಪ್ಪ ಬಸಣ್ಣ ನಿಂಬಾಳ (58) ಹತ್ಯೆಗೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೀಳೆಗಾಂವ್‌ನಲ್ಲಿ ಅಣ್ಣಪ್ಪ ಬಸಣ್ಣ ನಿಂಬಾಳ ಅವರ ಮೇಲೆ ಆರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇವರ ಮೇಲೆ ಮಾರಕಾಸ್ತ್ರಗಳಿಂದ ಹಠಾತ್ತನೆ ದಾಳಿ ನಡೆಸಿದ ಕಾರಣ ಅಣ್ಣಪ್ಪ ಬಸಣ್ಣ ನಿಂಬಾಳ ಅವರು ನಿರುತ್ತರರಾಗಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಖೀಳೆಗಾಂವ್ ಗ್ರಾಮಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಜಕೀಯ ದ್ವೇಷದಿಂದ ಹತ್ಯೆ?
ಅಣ್ಣಪ್ಪ ಬಸಣ್ಣ ನಿಂಬಾಳ ಅವರು ಖೀಳೆಗಾಂವ್ ಗ್ರಾಮದ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು. ಇವರು ಶಾಸಕ ಲಕ್ಷ್ಮಣ ಸವದಿ ಅವರ ಆಪ್ತರಾಗಿದ್ದಾರೆ. ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ಇವರು ಸಕ್ರಿಯರಾಗಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿಯೂ ಇವರು ಹೆಚ್ಚು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ರಾಜಕೀಯ ದ್ವೇಷದಿಂದಾಗಿ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಗ್ರಾಮದ ಮೂಲಗಳು ತಿಳಿಸಿವೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: High Court: ಹೈಕೋರ್ಟ್‌ನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ ಯತ್ನ
ಖೀಳೆಗಾಂವ್-ಅಥಣಿ ರಸ್ತೆಯ ಬಳಿ ಅಣ್ಣಪ್ಪ ಬಸಣ್ಣ ನಿಂಬಾಳ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಅವರು ಕೊಚ್ಚಿದ ಪರಿಣಾಮ ಭಾರಿ ಪ್ರಮಾಣದ ರಕ್ತಸ್ರಾವ ಉಂಟಾಗಿದೆ. ಇದರಿಂದಾಗಿ ಅಣ್ಣಪ್ಪ ಬಸಣ್ಣ ನಿಂಬಾಳ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಹತ್ಯೆಗೈದವರು ಯಾವ ಪಕ್ಷದವರು? ಅವರು ಯಾರು? ಹಿನ್ನೆಲೆ ಏನು ಎಂಬುದು ಸೇರಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ