ಉಡುಪಿ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಮಾವೇಶಕ್ಕೆ ಬಂದ ಕಾರ್ಯಕರ್ತರು ಬಿರಿಯಾನಿಗಾಗಿ ಕಾದು ಕಾದು ಸುಸ್ತಾಗಿ ವಾಪಸ್ ಹೋಗಿರುವ ಘಟನೆ ಭಾನುವಾರ ನಡೆದಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆ ಬೈಂದೂರು ಕ್ಷೇತ್ರದ ಉಪ್ಪಂದದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಅವರಿಗೆ ವಿತರಿಸಲು ಬಿರಿಯಾನಿ ತಯಾರಿಸಲಾಗಿತ್ತು. ಆದರೆ, ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ, ಎಚ್ಚರಿಕೆ ನೀಡಿದ್ದರಿಂದ ಬಿರಿಯಾನಿ ವಿತರಣೆಗೆ ಬ್ರೇಕ್ ಬಿದ್ದಿದೆ.
ಕಾರ್ಯಕರ್ತರಿಗೆ ಬಡಿಸಲು ಮಧ್ಯಾಹ್ನ ಬಿರಿಯಾನಿ ಸಿದ್ಧಪಡಿಸಲಾಗಿದೆ. ಆದರೆ, ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ, ಬಿರಿಯಾನಿ ವಿತರಿಸಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ಕಾರ್ಯಕ್ರಮಕ್ಕಾಗಿ ತಯಾರಿಸಿದ್ದ ಬಿರಿಯಾನಿ ಅಲ್ಲೇ ಉಳಿದಿದೆ. ನಂತರ ಬಿರಿಯಾನಿಗಾಗಿ ಕಾದು ಕಾದು ಸುಸ್ತಾದ ಕಾರ್ಯಕರ್ತರು, ತಿನ್ನದೇ ವಾಪಸ್ ಹೋಗಿದ್ದು ಕಂಡುಬಂತು.
ಇದನ್ನೂ ಓದಿ | Lok Sabha Election 2024: ಅಮಿತ್ ಶಾ ʼರೌಡಿʼ ಹೇಳಿಕೆ ಸಮರ್ಥಿಸಿದ ಯತೀಂದ್ರ; ಮೋದಿ ವಿರುದ್ಧವೂ ವಾಗ್ದಾಳಿ
ಸಮಾವೇಶದಲ್ಲಿ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ನಾನು ಗೆದ್ದರೆ ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆ. ಗೋವು ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು. ಹಿಂದು, ರಾಮ ಮಂದಿರ, ಗೋವು ಬಗ್ಗೆ ಮಾತನಾಡುವವರು ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದಾರೆ ಎಂದರು.
ಚುನಾವಣೆಗೆ ಮುನ್ನ ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಗೆದ್ದು ಬಂದು ಎಲ್ಲಾ ಕೆಲಸವನ್ನು ಮಾಡುತ್ತೇನೆ. ಶಿವಮೊಗ್ಗ, ಬೈಂದೂರಲ್ಲಿ ಯಾರು ಲೀಡ್ ನೋಡೋಣ? ನಾಮಪತ್ರ ದಿನ ರಾಷ್ಟ್ರಭಕ್ತ ಬಳಗ ಶಿವಮೊಗ್ಗದಲ್ಲಿ ಜಾತ್ರೆ ಮಾಡಲಿದೆ ಎಂದು ಹೇಳಿದರು.
ಸಚಿವರ, ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ: ಬಿಜೆಪಿ ದೂರು
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ ಮುಂದುವರಿದಿದೆ ಎಂದು ಕಿಡಿಕಾರಿರುವ ಬಿಜೆಪಿಯು (BJP Karnataka) ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿಯೆಂದು ಭಾವಿಸಿರುವಂತೆ ಕಾಣುತ್ತಿದೆ. ಮಾರ್ಚ್ 30ರಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ವಿಧಾನಸೌಧ ಕಚೇರಿಯಲ್ಲಿ ನಜ್ಮಾ ನಜೀರ್ ಚಿಕ್ಕನೇರಳೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಮೂಲಕ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ರಾಜ್ಯ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಅವರಿಗೆ ಸರ್ಕಾರಿ ಕಚೇರಿಯನ್ನು ಪಕ್ಷದ ಚಟುವಟಿಕೆ ಬಳಕೆ ಮಾಡಬಾರದು ಎಂಬುದು ತಿಳಿದಿದೆ. ಹಾಗಿದ್ದರೂ ನೀತಿ ಸಂಹಿತೆಯನ್ನು ಧಿಕ್ಕರಿಸಿ ರಾಜಕೀಯ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಮೂಗಿನಡಿಯಲ್ಲಿಯೇ ಇದು ನಡೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಅವರ ಈ ನಿಷ್ಕ್ರಿಯತೆಯು ಆತಂಕಕಾರಿಯಾಗಿದೆ ಎಂದು ಬಿಜೆಪಿ ದೂರಿದೆ.
ಲೋಕಸಭಾ ಚುನಾವಣೆಗಳು ಘೋಷಣೆಯಾಗಿ ಈಗಾಗಲೇ ನಾಮಪತ್ರ ಸಲ್ಲಿಕೆಯು ಆರಂಭವಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಮಾಡಬೇಕಾದ ಸರ್ಕಾರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ. ಹಲವಾರು ಆಡಳಿತ ಪಕ್ಷದ ಶಾಸಕರ ಕಚೇರಿಗಳಲ್ಲಿ ಪಕ್ಷದ ಚಟುವಟಿಕೆ ಇನ್ನೂ ಮುಂದುವರಿದಿದೆ ಎಂದು ಬಿಜೆಪಿ ದೂರಿನಲ್ಲಿ ತೀವ್ರ ಅಸಮಾಧಾನವನ್ನು ಹೊರಹಾಕಿದೆ.
ವಿಧಾನಸೌಧದ ಕಚೇರಿಗಳ ಮುಚ್ಚಿಸಿ
ಸಚಿವರು ವಿಕಾಸಸೌಧದಿಂದ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆಯು ಮಾರ್ಚ್ 25 ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಚುನಾವಣಾ ಆಯೋಗವು ಕೂಡಲೇ ವಿಧಾನಸೌಧ ಸಚಿವರ ಕಚೇರಿಗಳನ್ನು ಕೂಡಲೇ ಮುಚ್ಚಿಸಬೇಕು. ಸರ್ಕಾರಿ ಕಟ್ಟಡಗಳಲ್ಲಿ ಸಚಿವರಿಗೆ ಮತ್ತು ಶಾಸಕರಿಗೆ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಲು ಕೋರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. ನಿಯಮವನ್ನು ಮೀರಿ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.
ಇದನ್ನೂ ಓದಿ | Lok Sabha Election 2024: ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ – ಮಂಗಳಾ ಅಂಗಡಿ ಫೈಟ್; ಪಕ್ಷ ಮುಖ್ಯವಾದರೆ ಬೀಗರಿಗೇ ಏಕೆ ಟಿಕೆಟ್?
ಶಾಸಕ ಸುರೇಶ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್, ಎಚ್.ಎನ್. ಚಂದ್ರಶೇಖರ್, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ಟಿ.ಎಸ್. ಸಂಕೀರ್ತ್ ಉಪಸ್ಥಿತರಿದ್ದರು.