ಶಿವಮೊಗ್ಗ: ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಮಯದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಹೊಂದಿದ್ದ ಆಸ್ತಿಗಿಂತ ಈಗ ನಾಲ್ಕು ಪಟ್ಟು ಆಸ್ತಿ ಹೆಚ್ಚಾಗಿದ್ದು, ಸದ್ಯ ಒಟ್ಟು 35.86 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಅವರು ಪತ್ನಿಗೆ ಸಾಲ ನೀಡಿದ್ದು, ಇಬ್ಬರ ಬಳಿಯೂ ಒಂದೇ ಒಂದು ವಾಹನವಿಲ್ಲ. ಇನ್ನು ಬಿ.ಕಾಂ. ಪದವೀಧರರಾದ ಈಶ್ವರಪ್ಪ ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಬಳಿ 25 ಲಕ್ಷ ರೂ. ನಗದು ಇದೆ, ಪತ್ನಿ ಬಳಿ 2 ಲಕ್ಷ ರೂ. ಇದೆ. ಕೆಎಸ್‌ಸಿಎ ಬ್ಯಾಂಕ್‌ನ ಶಾಸಕರ ಭವನ ಶಾಖೆಯಲ್ಲಿ ಈಶ್ವರಪ್ಪ ಹೆಸರಿನಲ್ಲಿ ಎರಡು ಖಾತೆಗಳಿದ್ದು, ಒಂದರಲ್ಲಿ 1.38 ಲಕ್ಷ ರೂ. ನಗದು, ಮತ್ತೊಂದು ಖಾತೆಯಲ್ಲಿ 1,699 ರೂ. ನಗದು ಇದೆ. ಬ್ಯಾಂಕ್ ಆಫ್ ಬರೋಡಾದ ಶಿವಮೊಗ್ಗ ಶಾಖೆಯಲ್ಲಿ ಎರಡು ಖಾತೆ ಇದ್ದು, ಒಂದರಲ್ಲಿ 5.45 ಲಕ್ಷ ರೂ., ಮತ್ತೊಂದರಲ್ಲಿ 1 ಲಕ್ಷ ರೂ. ನಗದು ಇದೆ. ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದು, 77 ಸಾವಿರ ರೂ. ನಗದು ಇದೆ.
ಹಲವೆಡೆ ಹೂಡಿಕೆ
ವಿವಿಧ ಸಂಸ್ಥೆಗಳಲ್ಲಿ ಈಶ್ವರಪ್ಪ ಹೂಡಿಕೆ ಮಾಡಿದ್ದು, ಈಶ್ವರಪ್ಪ ಬೆಂಗಳೂರಿನ ವಿಶ್ವ ವಿನಾಯಕ ಬಿಲ್ಡ್ ಟೆಕ್‌ನಲ್ಲಿ 9 ಲಕ್ಷ ರೂ., ಪ್ರೊಫೆಷನಲ್ ಗ್ಲೋಬಲ್ ಇನ್‌ಫ್ರಾನಲ್ಲಿ 40 ಲಕ್ಷ ರೂ., ಪಾಲುದಾರಿಕೆ ಸಂಸ್ಥೆ ಮೈಸೂರಿನ ವರ್ಸೋಕೆಮ್‌ನಲ್ಲಿ 1.50 ಲಕ್ಷ ರೂ., ಶಿವಮೊಗ್ಗದ ಉಡುಪು ಫ್ಯಾಷನ್ಸ್‌ನಲ್ಲಿ 20 ಲಕ್ಷ ರೂ., ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನಲ್ಲಿ 15 ಲಕ್ಷ ರೂ., ಮಾರಿಕಾಂಬಾ ಸೌಹಾರ್ದ ಸಹಕಾರಿಯಲ್ಲಿ 50 ಸಾವಿರ ರೂ., ಬೆಂಗಳೂರಿನ ರೆಟ್ರಾ ಲೈಫ್ ಸೈನ್ಸಸ್‌ನಲ್ಲಿ 9 ಲಕ್ಷ ರೂ., ಮೆಟ್ರೋ ಹೆಲ್ತ್ ಕೇರ್‌ನಲ್ಲಿ 55 ಲಕ್ಷ ರೂ., ಆರ್ 3 ಎಸ್ ಬಿಸ್ನೆಸ್ ಪಾರ್ಕ್‌ನಲ್ಲಿ 10 ಲಕ್ಷ ರೂ., ಸತ್ಯಧರ್ಮ ಪ್ರಕಾಶನದಲ್ಲಿ 1.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಅದೇ ರೀತಿ ಪತ್ನಿ ಜಯಲಕ್ಷ್ಮಿ ಅವರು ಪಾಲುದಾರರಾಗಿರುವ ಜಾಮ್ ಪೈಪ್ಸ್‌ನಲ್ಲಿ 44.42 ಲಕ್ಷ ರೂ., ಶ್ವೇತಾ ಎಂಟರ್‌ಪ್ರೈಸೆಸ್‌ನಲ್ಲಿ 1.12 ಲಕ್ಷ ರೂ., ಚೈತ್ರಾ ಎಂಟರ್‌ಪ್ರೈಸೆಸ್‌ನಲ್ಲಿ 62.57 ಲಕ್ಷ ರೂ., ಭುಮಿಕಾ ಲಾಜಿಸ್ಟಿಕ್ಸ್‌ನಲ್ಲಿ 44.91 ಲಕ್ಷ ರೂ., ಪುಷ್ಪಕ್ ಎಂಟರ್‌ಪ್ರೈಸೆಸ್‌ನಲ್ಲಿ 2.59 ಲಕ್ಷ ರೂ.,ಆದಿತ್ಯ ಟ್ರಾನ್ಸ್‌ಪೋರ್ಟ್‌ನಲ್ಲಿ 4.53 ಲಕ್ಷ ರೂ., ಉಡುಪು ಫ್ಯಾಷನ್ಸ್‌ನಲ್ಲಿ 20 ಲಕ್ಷ ರೂ., ರೆಟ್ರಾ ಲೈಫ್ ಸೈನ್ಸಸ್‌ನಲ್ಲಿ 14 ಲಕ್ಷ ರೂ., ಮಾರಿಕಾಂಬಾ ಮೈಕ್ರೋ ಫೈನಾನ್ಸ್‌ನಲ್ಲಿ 4 ಲಕ್ಷ ರೂ., ಬೆಂಗಳೂರಿನ ಭಾರತ್ ಇಂಡಸ್ಟ್ರೀಸ್‌ನಲ್ಲಿ 80.15 ಲಕ್ಷ ರೂ. ಹೂಡಿಕೆ ಮಾಡಲಾಗಿದೆ.
ಇದನ್ನೂ ಓದಿ | Lok Sabha Election 2024: ಕೋಲಾರ ಕಾಂಗ್ರೆಸ್‌ನಲ್ಲಿ ನಿಲ್ಲದ ಬಣ ರಾಜಕೀಯ; ಬೇಸತ್ತ ಕಾರ್ಯಕರ್ತರು
ವಿವಿಧ ಸಂಸ್ಥೆಗಳಿಗೆ ಸಾಲ
ಈಶ್ವರಪ್ಪ ಹೆಂಡತಿಗೆ 15 ಲಕ್ಷ ರೂ. ಸಾಲ ಸೇರಿ ವಿವಿಧ ಸಂಸ್ಥೆಗಳಿಗೆ ಸಾಲ ನೀಡಿದ್ದಾರೆ. ಬೆಂಗಳೂರಿನ ಭಾರತ್ ಇಂಡಸ್ಟ್ರೀಸ್‌ಗೆ 65.15 ಲಕ್ಷ ರೂ., ಜಯಲಕ್ಷ್ಮಿ ಫ್ಯೂಯಲ್ಸ್‌ಗೆ 16.50 ಲಕ್ಷ ರೂ., ಮಲ್ಲೇಶ್ವರ ಎಂಟರ್‌ಪ್ರೈಸೆಸ್‌ನಲ್ಲಿ 1.84 ಲಕ್ಷ ರೂ., ಪತ್ನಿ ಜಯಲಕ್ಷ್ಮಿ ಅವರಿಗೆ 15.78 ಲಕ್ಷ ರೂ. ಸಾಲ ನೀಡಿದ್ದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈಶ್ವರಪ್ಪ ಅವರಿಗೆ ಬರಬೇಕಿರುವ ಬಾಡಿಗೆ ಮೊತ್ತ 23.36 ಲಕ್ಷ ರೂ. ಇತರ ವ್ಯಕ್ತಿಗಳಿಂದ ಬರಬೇಕಿರುವುದು 26.89 ಲಕ್ಷ ರೂ., ಪತ್ನಿ ಜಯಲಕ್ಷ್ಮಿ ಅವರಿಗೆ 66.25 ಲಕ್ಷ ರೂ ಬರಬೇಕಿದೆ. ಮತ್ತೊಂದೆಡೆ ಈಶ್ವರಪ್ಪ ಅವರು ಕೋಟ್ಯಂತರ ರೂ. ಸಾಲಗಾರರಾಗಿದ್ದಾರೆ. ಈಶ್ವರಪ್ಪ ಅವರಿಗೆ 5.87 ಕೋಟಿ ರೂ. ಸಾಲವಿದೆ, ಪತ್ನಿ ಜಯಲಕ್ಷ್ಮಿ ಅವರಿಗೆ 70.80 ಲಕ್ಷ ಸಾಲವಿದೆ ಎಂದು ಮಾಹಿತಿ ನೀಡಿದ್ದಾರೆ.
ಚಿನ್ನ, ಬೆಳ್ಳಿ ಎಷ್ಟಿದೆ?
ಪತ್ನಿ ಬಳಿ ಹೆಚ್ಚು ಬಂಗಾರ, ಬೆಳ್ಳಿ ಇರುವುದು ಕಂಡುಬಂದಿದೆ. ಈಶ್ವರಪ್ಪ ಬಳಿ 300 ಗ್ರಾಂ ಬಂಗಾರ, 2 ಕೆ.ಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 18.50 ಲಕ್ಷ ರೂ. ಆಗಿದೆ. ಪತ್ನಿ ಜಯಲಕ್ಷ್ಮಿ ಅವರ ಬಳಿ 500 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 30 ಲಕ್ಷ ರೂ. ಆಗಿದೆ.
ಕೃಷಿ, ವಾಣಿಜ್ಯ ಭೂಮಿ ಎಲ್ಲೆಲ್ಲಿದೆ?
ಈಶ್ವರಪ್ಪ ಅವರ ಬಳಿ ಒಟ್ಟು 22.35 ಕೋಟಿ ರೂ. ಮೌಲ್ಯದ ಅಸ್ತಿ ಇದೆ. ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ 3.10 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಈಶ್ವರಪ್ಪ ಅವರ ಹೆಸರಿನಲ್ಲಿ ನಿದಿಗೆ ಗ್ರಾಮದಲ್ಲಿ 1.31 ಎಕರೆ, ಊರಗಡೂರಿನಲ್ಲಿ 1.05 ಎಕರೆ, ಸೋಮಯ್ಯ ಲೇಔಟ್‌ನಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 3880 ಚದರ ಅಡಿ ಕೃಷಿಯೇತರ ಭೂಮಿ ಇದೆ. ಮಾಚೇನಹಳ್ಳಿಯಲ್ಲಿ 4.24 ಎಕರೆ ಕೃಷಿಯೇತರ ಭೂಮಿ ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆ ಇದೆ. ಬಿ.ಎಚ್.ರಸ್ತೆಯಲ್ಲಿ 11,926 ಚದರ ಅಡಿಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ (ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆ). ಬೆಂಗಳೂರು ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ 30×40 ಅಡಿಯಲ್ಲಿ ವಾಣಿಜ್ಯ ಕಟ್ಟಡ, ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿ 5700 ಚದರ ಅಡಿಯಲ್ಲಿ ವಾಣಿಜ್ಯ ಕಟ್ಟಡ, ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 4500 ಚದರ ಅಡಿಯ ವಸತಿ ಕಟ್ಟಡ ಇದೆ.
ಚರಾ, ಸ್ಥಿರಾಸ್ತಿಗಳ ಒಟ್ಟು ಮೌಲ್ಯ
ಇದನ್ನೂ ಓದಿ | Lok Sabha Election 2024: ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ
ಈಶ್ವರಪ್ಪ ಬಳಿ ಇರುವ ಚರಾಸ್ತಿಯ ಒಟ್ಟು ಮೌಲ್ಯ 4.28 ಕೋಟಿ ರೂ. ಆಗಿದೆ. ಪತ್ನಿ ಜಯಲಕ್ಷ್ಮಿ ಅವರ ಬಳಿ 3.77 ಕೋಟಿ ರೂ. ಇನ್ನು, ಸ್ಥಿರಾಸ್ತಿಗಳ ಪೈಕಿ, ಈಶ್ವರಪ್ಪ ಸ್ವಯಾರ್ಜಿತ ಆಸ್ತಿ ಮೌಲ್ಯ 10.95 ಕೋಟಿ ರೂ. ಪಿತ್ರಾರ್ಜಿತ ಆಸ್ತಿ ಮೌಲ್ಯ 1.60 ಕೋಟಿ ರೂ., ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿರುವ ಸ್ವಯಾರ್ಜಿತ ಆಸ್ತಿ ಮೌಲ್ಯ 7.31 ಕೋಟಿ ರೂ. ಆಗಿದೆ.
2018ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಕೆ.ಎಸ್.ಈಶ್ವರಪ್ಪ 6.41 ಕೋಟಿ ಮೌಲ್ಯದ ಆಸ್ತಿ ಮತ್ತು ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದರು. ಇದೀಗ ಒಟ್ಟು ಆಸ್ತಿ 35.86 ಕೋಟಿ ರೂ.ಗೆ ಏರಿಕೆಯಾಗಿದೆ.