Site icon Vistara News

Lok sabha Election 2024: I.N.D.I.A ಒಕ್ಕೂಟ ಹುಟ್ಟುವ ಮೊದಲೇ ಸತ್ತಿತ್ತು: ಪ್ರಲ್ಹಾದ್‌ ಜೋಶಿ

Pralhad Joshi

ಬೆಂಗಳೂರು: ನೇತೃತ್ವ, ನೀತಿ, ನಿಯತ್ತು ಮೂರೂ ಇಲ್ಲದಂತಹದ್ದು I.N.D.I.A ಒಕ್ಕೂಟ. ಇದನ್ನರಿತೇ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಒಕ್ಕೂಟದಿಂದ (Lok sabha Election 2024) ಹೊರ ಬಂದಿದ್ದಾರೆ. ಈ I.N.D.I.A ಒಕ್ಕೂಟ ಹುಟ್ಟುವ ಮೊದಲೇ ಸತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದರು.

ನಗರದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, I.N.D.I.A ಒಕ್ಕೂಟ ಜನ್ಮತಾಳುವ ಮೊದಲೇ ಸತ್ತಂತೆ ಇತ್ತು. ಕಾಂಗ್ರೆಸ್ ಮತ್ತು ಆರ್‌ಜೆಡಿ ಎರಡೂ ಕಡು ಭ್ರಷ್ಟರ ಪಕ್ಷಗಳು. ಕೇವಲ ಸ್ವ ಕುಟುಂಬ ಮತ್ತು ಪರಿವಾರಕ್ಕಾಗಿ ಹೋರಾಡುವ ಪಕ್ಷಗಳು. ಜನರ ಕಷ್ಟ, ದುಃಖ, ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುವ ನಾಯಕರ ಪಕ್ಷಗಳು ಎಂದು ಜೋಶಿ ಜರಿದರು.

ಇಂಡಿಯಾ ಒಕ್ಕೂಟದಲ್ಲಿ ಮನೆ ಮಾಡಿದ್ದ ವಿರೋಧಿ ನಡೆಯಿಂದ ಬೇಸತ್ತು, ದುಃಖಿತರಾಗಿ ನಿತೀಶ್ ಕುಮಾರ್ ಹೊರ ಬಂದಿದ್ದಾರೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ, ಮಹಾ ಘಟ್ ಬಂಧನ್ ಕೇವಲ ಫೋಟೋಶೂಟ್‌ಗಾಗಿ ಎಂಬುದನ್ನು ಮೊದಲೇ ಹೇಳಿದ್ದೆವು. ಇಂಡಿಯಾ ಒಕ್ಕೂಟ ಸೇರಿದವರಿಗೆ ಈಗ ಅದರ ನೈಜ ಅನುಭವವಾಗುತ್ತಿದೆ ಎಂದು ಜೋಶಿ ಹೇಳಿದರು.

ಇದನ್ನೂ ಓದಿ | Congress Karnataka : ಕಾಂಗ್ರೆಸ್‌ಗೆ ಮುಳ್ಳಾದ ನಿಗಮ-ಮಂಡಳಿ; ಅಪಸ್ವರದಿಂದ ಕೈ ಗಲಿಬಿಲಿ

ಬಿಜೆಪಿಗೆ ಜಗದೀಶ್ ಶೆಟ್ಟರ್ ಮರಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಪಕ್ಷಕ್ಕೆ ಮರಳಿರುವುದು ಸಹಜವಾಗಿದೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕಾರಿಣಿ ಆರಂಭ; 28ಕ್ಕೆ 28 ಗೆಲ್ಲಲೇ ಬೇಕು ಎಂದ ಬಿಎಸ್‌ವೈ

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ (Parliament Election 2024) ಸಿದ್ಧವಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP State Executive Meeting) ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭವಾಗಿದೆ (BJP Karnataka). ಕೇಂದ್ರ ಸಚಿವ ಭೂಪೇಂದ್ರ ಯಾದವ್, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.‌ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ಇತರ ನಾಯಕರು ಭಾಗವಹಿಸಿದ್ದಾರೆ. ವೇದಿಕೆಯ ಮೇಲೆ ಇಟ್ಟ ಶ್ರೀರಾಮ ಚಂದ್ರನ ಕಂಚಿನ ಮೂರ್ತಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಕಾರ್ಯಕಾರಿಣಿ ಸಭೆಯ ಉದ್ಘಾಟನೆ ನಡೆಯಿತು. ನಾಯಕರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

BJP Karnataka: ಲೋಕಸಭಾ ಸಮರ ದೊಡ್ಡ ಸತ್ವಪರೀಕ್ಷೆ: ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ ಅವರು, ಮುಂದಿನ ಲೋಕಸಭಾ ಸಮರವು ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ ಎಂದು ಹೇಳಿದರು.

2019ರಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಇದು ಜನರ ಸಂಕಲ್ಪ ಶಕ್ತಿಯಾಗಿತ್ತು. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.

ಜನರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಲಹದಲ್ಲಿ ತೊಡಗಿದೆ. ಇವರ ಕಚ್ಚಾಟದಿಂದ ಅಧಿಕಾರ ಕುಸಿದುಬಿದ್ದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು. ಇದರ ನಡುವೆಯೂ ಅವರು ದುರ್ಮಾರ್ಗದಲ್ಲಿ ಮತ ಗಳಿಸುವ ಕುತಂತ್ರ ನಡೆಸಿದ್ದಾರೆ. ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡುವ ಸವಾಲು ನಮ್ಮ ಮುಂದಿದೆ ಎಂದು ತಿಳಿಸಿದರು.

ಜನರು ಈ ಸರಕಾರದ ಬಗ್ಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಈ ಸರಕಾರಕ್ಕೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ. ಹೆಣ್ಮಕ್ಕಳ ಮಾನ ರಕ್ಷಿಸಲು ಸಾಧ್ಯವಾಗಿಲ್ಲ. ಅರಾಜಕತೆ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದೆಲ್ಲವನ್ನು ನೋಡುತ್ತ ಸುಮ್ಮನಿರಲು ಅಸಾಧ್ಯ. ಜನರ ಪರವಾಗಿ, ರಾಜ್ಯದ ಪರವಾಗಿ ನಿಂತು ಹೋರಾಟ ಮಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ | India Bloc: ನಿತೀಶ್‌ ವಿದಾಯ ವದಂತಿ ಬೆನ್ನಲ್ಲೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು

ಬಿಜೆಪಿಗೆ ಜಗದೀಶ ಶೆಟ್ಟರ್ ಸೇರಿದ್ದು, ನಮಗೊಂದು ದೊಡ್ಡ ಶಕ್ತಿಯನ್ನು ಕೊಟ್ಟಿದೆ. ಅವರಿಗೆ ವಿಶೇಷ ಸ್ವಾಗತ ಎಂದರು. ನೂತನ ರಾಜ್ಯ, ಜಿಲ್ಲಾ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು.

Exit mobile version