Site icon Vistara News

Laxman Savadi: ‘ಭಾರತ್‌ ಮಾತಾ ಕಿ ಜೈ’ ಬಿಜೆಪಿ ಅಪ್ಪನ ಮನೆ ಆಸ್ತಿನಾ? ಲಕ್ಷ್ಮಣ ಸವದಿ ಆಕ್ರೋಶ

Laxman Savadi

Lok Sabha Election 2024: Is Bharat Mata Ki Jai Property Of BJP; Laxman Savadi Taunts In Kalaburagi

ಕಲಬುರಗಿ: ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಅವರು ಭಾರತ್‌ ಮಾತಾ ಕಿ ಜೈ (Bharat Mata Ki Jai) ಎಂಬುದಾಗಿ ಕೂಗುವ ಮೊದಲು “ಖರ್ಗೆಯವರು ತಪ್ಪು ತಿಳಿದುಕೊಳ್ಳಬಾರದು” ಎಂದು ಹೇಳಿರುವುದು ಈಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ನಲ್ಲಿ (Congress) ಭಾರತ್‌ ಮಾತಾ ಕಿ ಜೈ ಎಂದು ಕೂಗಲು ಕೂಡ ಅನುಮತಿ ಪಡೆಯಬೇಕಾದ ದುಸ್ಥಿತಿ ಇದೆ” ಎಂದು ಬಿಜೆಪಿ ಟೀಕಿಸಿದ ಬೆನ್ನಲ್ಲೇ ಲಕ್ಷ್ಮಣ ಸವದಿ (Laxman Savadi) ತಿರುಗೇಟು ನೀಡಿದ್ದಾರೆ. “ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆಯು ಬಿಜೆಪಿ (BJP) ಮನೆ ಆಸ್ತಿನಾ” ಎಂದು ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, “ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತಹ ಸ್ಥಿತಿ ಬಿಜೆಪಿಗೆ ಬಂದಿದೆ. ಭಾರತ್‌ ಮಾತಾ ಕಿ ಜೈ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಅಭಿಮಾನ ಹಾಗೂ ದೇಶಭಕ್ತಿಯಾಗಿದೆ. ಕಾಂಗ್ರೆಸ್‌ನಲ್ಲಿ ಕೂಡ ಭಾರತ್‌ ಮಾತಾ ಕಿ ಜೈ ಎನ್ನುತ್ತೇವೆ. ದೇಶಭಕ್ತಿ, ಘೋಷಣೆಗಳು ಬಿಜೆಪಿಯವರಿಗೆ ಗುತ್ತಿಗೆ ಕೊಡಲಾಗಿದೆಯೇ? ವಂದೇ ಮಾತರಂ ಅನ್ನುತ್ತೇವೆ, ಜೈ ಹಿಂದು ಕೂಡ ಎನ್ನುತ್ತೇವೆ. ನಮ್ಮಲ್ಲಿ ಇವರಿಗಿಂತ ದೇಶಭಕ್ತಿ ಹೆಚ್ಚಿದೆ” ಎಂದು ತಿರುಗೇಟು ನೀಡಿದರು.

“ಬಿಜೆಪಿಯವರ ದೇಶಭಕ್ತಿಯು ತೋರಿಕೆಗೆ ಸೀಮಿತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್.‌ 400ಕ್ಕೂ ಅಧಿಕ ಸೀಟು ಗೆದ್ದರೆ ಸಂವಿಧಾನ ಬದಲಾಯಿಸುತ್ತೇವೆ ಎಂಬುದಾಗಿ ಹೇಳುತ್ತಾರೆ. ಹಾಗಾಗಿ, ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವನ್ನು ವಿರೋಧಿಸುತ್ತಾರೆ, ಜಾತಿ ವಿರೋಧ ಮಾಡುತ್ತಾರೆ. ಇವರ ಮನಸ್ಥಿತಿಯಿಂದಾಗಿ ದೇಶಕ್ಕೆ ಹಾನಿಯಾಗುತ್ತಿದೆ” ಎಂದು ಹೇಳಿದರು.

ನನ್ನ ಹೆಸರೇ ಲಕ್ಷ್ಮಣ, ಜೈ ಶ್ರೀರಾಮ್‌ ಎನ್ನುವೆ

“ದೇಶದಲ್ಲಿ ಘೋಷಣೆ ಕೂಗಲು ಬಿಜೆಪಿಯವರ ಪರ್ಮಿಷನ್‌ ತೆಗೆದುಕೊಳ್ಳಬೇಕಾ? ಅದೇ ಅವರ ಅಪ್ಪನ ಮನೆ ಆಸ್ತಿಯೇ? ನನ್ನ ಹೆಸರೇ ಲಕ್ಷ್ಮಣ. ರಾಮನ ತಮ್ಮನ ಹೆಸರು ಲಕ್ಷ್ಮಣ. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತೇವೆ. ಭಾರತ್‌ ಮಾತಾ ಕಿ ಜೈ ಎನ್ನುತ್ತೇವೆ. ದೇಶಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ” ಎಂದರು. ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, “ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದು ಬಿಜೆಪಿಯವರ ಕೆಲಸ. ಇಂತ ಕೀಳು ರಾಜಕೀಯದಿಂದಾಗಿಯೇ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ‘ನನಗೆ ಒಳ್ಳೇ ದಿನಗಳು ಬರುತ್ತವೆ’ಎಂದ ಲಕ್ಷ್ಮಣ್​ ಸವದಿ; ಸಿದ್ದರಾಮಯ್ಯ ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿಯಾ?

Exit mobile version