Site icon Vistara News

Lok Sabha Election 2024: ಮನವೊಲಿಕೆ ಯತ್ನ ವಿಫಲ; ಪಕ್ಷೇತರ ಸ್ಪರ್ಧೆ, ಮೋದಿಗೆ ಬೆಂಬಲ ಎಂದ ಈಶ್ವರಪ್ಪ

KS Eshwarappa says he won't attend PM Modi's event

ಶಿವಮೊಗ್ಗ: ಪುತ್ರನಿಗೆ ಲೋಕಸಭೆ ಚುನಾವಣೆ (Lok Sabha Election 2024) ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಮನವೊಲಿಸುವ ಕೇಂದ್ರ ಬಿಜೆಪಿ ನಾಯಕರ ಪ್ರಯತ್ನ ವಿಫಲವಾಗಿದೆ. ಮಾ.18ರಂದು ನಗರದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಗಮಿಸುವಂತೆ ದೆಹಲಿ ನಾಯಕರು ಮನವಿ ಮಾಡಿದ್ದಾರೆ. ಆದರೆ, ತಾವು ಕಾರ್ಯಕ್ರಮಕ್ಕೆ ಬರೋದಿಲ್ಲ ಎಂದು ಖಡಾಖಂಡಿತವಾಗಿ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಎಂಎಲ್‌ಸಿ ಡಿ.ಎಸ್.ಅರುಣ್ ಸೇರಿ ಹಲವು ನಾಯಕರು ಕೆ.ಎಸ್‌. ಈಶ್ವರಪ್ಪ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದರು. ಸೋಮವಾರ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ, ಪ್ರಧಾನಿ ಆಗಮನಕ್ಕೂ ಮುನ್ನ ಈಶ್ವರಪ್ಪ ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ, ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ | SR Srinivas: ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್‌ಗೆ ಬೇಲ್ ವಿಳಂಬ; ಬಂಧನ ಭೀತಿ

ಈಶ್ವರಪ್ಪ ನಿವಾಸದಿಂದ ನಿರ್ಗಮಿಸುವ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಅವರು, ಈಶ್ವರಪ್ಪ ಸಂಧಾನದ ಬಗ್ಗೆ ನಾನೇನೂ ಹೇಳಲ್ಲ. ಈಶ್ವರಪ್ಪ ಮನೆಯಲ್ಲಿರುವ ಮಕ್ಕಳ ಜೊತೆ ನಾನು ಮಾತನಾಡಿಲ್ಲ. ಇದು ಪರಿವಾರದ ಸಭೆಯಾಗಿದೆ. ಈಶ್ವರಪ್ಪ ಜತೆ ಮಾತನಾಡಿರುವುದು ವಿಷಯಗಳು ನಿಮ್ಮ ಮುಂದೆ ಚರ್ಚೆ ಮಾಡಲ್ಲ ಎಂದರು.

ಬಂಡಾಯವಾಗಿ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ

ಕೇಂದ್ರ ನಾಯಕರ ಭೇಟಿ ಬಳಿಕ ಮಾತನಾಡಿದ ಕೆ.ಎಸ್‌.ಈಶ್ವರಪ್ಪ ಅವರು, ಮನೆಗೆ ರಾಧಾ ಮೋಹನ್ ಅಗರ್ವಾಲ್ ಮತ್ತು ರಾಜೇಶ್ ಬಂದಿದ್ದರು. ನಾನು ಏಕೆ ಬಂಡಾಯ ಸ್ಪರ್ಧೆ ಮಾಡುತ್ತಿದ್ದೀನಿ ಎಂಬುವುದನ್ನು ಹೇಳಿದ್ದೇನೆ. ಮಗನಿಗೆ ಎಂಎಲ್‌ಸಿ ಕೊಡುತ್ತೇವೆ ಎಂಬ ಆಫರ್‌ ನೀಡಿದರು. ಆದರೆ, ನಾನು ಅದಕ್ಕೆ ಒಪ್ಪದೇ, ಪಕ್ಷ ಶುದ್ಧಿ ಆಗಬೇಕು ಎಂದು ಹೇಳಿದ್ದೇನೆ. ನಾನು ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ, ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ, ನಂತರ ಮೋದಿಗೆ ಬೆಂಬಲ ಕೊಡುವೆ ಎಂದು ಹೇಳಿದರು.

ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್‌ಗೆ ಅವರು ತಿಳಿಸುತ್ತಾರೆ. ಮೋದಿ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು, ನಾನು ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು.

ಇದನ್ನೂ ಓದಿ | Lok Sabha Election 2024: ಬಿಆರ್‌ಎಸ್‌ಗೆ ಮತ್ತೊಂದು ಶಾಕ್‌; ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಂಸದ ರಂಜಿತ್ ರೆಡ್ಡಿ

ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಈಶ್ವರಪ್ಪ ಆಕ್ರೋಶದಿಂದ ಬಂಡಾಯ ಸ್ಪರ್ಧೆ ಮಾಡುತ್ತಾರೆ ಎಂಬ ನಂಬಿಕೆ ಬಿಜೆಪಿಯವರಲ್ಲಿ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸುತ್ತಾರೆ, ನಾನು ಹೋರಾಟ ನಡೆಸುತ್ತಿರುವುದೇ ಬಿಜೆಪಿಯಲ್ಲಿನ ಬದಲಾವಣೆಗಾಗಿ, ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.

ಮಾ. 18ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಅದ್ಧೂರಿ ಎಂಟ್ರಿಗೆ ಪ್ಲ್ಯಾನ್!

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇದೇ ಮಾ. 18ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ರಾಜ್ಯ ಬಿಜೆಪಿ ನಾಯಕರು (BJP Karnataka Leaders) ತಯಾರಿ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಬೃಹತ್‌ ವೇದಿಕೆಗೆ ವಾಹನದ ಮೂಲಕ ಕರೆತರಲು ಪ್ಲ್ಯಾನ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಯುವಕರು, ಮಹಿಳೆಯರು, ರೈತರು ಸೇರಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸುತ್ತಮುತ್ತಲ ಜಿಲ್ಲೆಗಳಿಂದ ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

5 ಲೋಕಸಭಾ ಕ್ಷೇತ್ರಗಳ ಸಂಸದರು ಭಾಗಿ

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳು ವೇದಿಕೆ ಮೇಲೆ ಇರಲಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ದಾವಣಗೆರೆಯ ಸಂಸದ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವೇದಿಕೆ ಮೇಲೆ ಇರುತ್ತಾರೆ. ಮಂಗಳೂರಿನ ಅಭ್ಯರ್ಥಿ ಬ್ರಿಜೇಶ್ ಚೌಟ ಸಹ ಭಾಗವಹಿಸಲಿದ್ದಾರೆ.

ವೇದಿಕೆಯಲ್ಲಿರುವ ಗಣ್ಯರು

ಪ್ರಧಾನಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸಿ.ಟಿ. ರವಿ, ಮಾಜಿ- ಹಾಲಿ ಶಾಸಕರು ವೇದಿಕೆಯಲ್ಲಿ ಇರುತ್ತಾರೆ.
ವಾಹನದ ಮೂಲಕ ವೇದಿಕೆಯತ್ತ ತೆರಳುವ ಮೋದಿ

ಶಿವಮೊಗ್ಗದ ಈ ಬೃಹತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ಕರೆ ತರಲು ಪ್ಲ್ಯಾನ್‌ ಮಾಡಿಕೊಳ್ಳಲಾಗುತ್ತಿದೆ. ಅಂದರೆ ಪ್ರಧಾನಿ ಮೋದಿಯವರು ತೆರೆದ ವಾಹನದಲ್ಲಿ ಬೃಹತ್ ಪೆಂಡಾಲ್‍ನ ಮಧ್ಯಭಾಗದಿಂದ ಸಾಗಲಿದ್ದು, ಸಮಾವೇಶದಲ್ಲಿ ಸೇರಿರುವ ಜನರತ್ತ ಕೈಬೀಸಿ ಸಾಗಲಿದ್ದಾರೆ. ಹೀಗಾಗಿ ನಾಗರಿಕರು ವೇದಿಕೆ ಸಮೀಪದಲ್ಲಿಯೇ ಮೋದಿಯವರನ್ನು ನೋಡಬಹುದಾಗಿದೆ.

ಭಾನುವಾರ (ಮಾ. 17) ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ರಾಜ್ಯದಲ್ಲಿ 28ಕ್ಕೆ 28 ಸೀಟು ಗೆಲ್ಲುವುದರ ಕಡೆ ಪಕ್ಷ ಗಮನ ಕೊಡಲಿದೆ. ಸಾರ್ವಜನಿಕರು ಈ ಸಭೆಯನ್ನು ಯಶಸ್ವಿಯಾಗಿ ಮಾಡಬೇಕು. ವಿಕಸಿತ ಭಾರತ ಸಂಕಲ್ಪಕ್ಕೆ ಜನರು ಸ್ಪಂದಿಸಲು ಮನವಿ ಮಾಡಿದರು. ಇವತ್ತು ಹೋಗಿ ಈಶ್ವರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಎನ್‌. ರವಿಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: Lok Sabha Election 2024: 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದಿಗ್ವಿಜಯ; ಈ ಆತ್ಮವಿಶ್ವಾಸಕ್ಕೆ ಕಾರಣ ಬಿಚ್ಚಿಟ್ಟ ವಿಜಯೇಂದ್ರ

ಸಂಸದ ಬಿ.ವೈ.ರಾಘವೇಂದ್ರ, ಸ್ಥಳೀಯ ಬಿಜೆಪಿ ಮುಖಂಡರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Exit mobile version