Site icon Vistara News

Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

Minister Dinesh Gundurao latest statement

ಬೆಂಗಳೂರು: ಚುನಾವಣೆ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ಹಸಿ ಸುಳ್ಳುಗಳನ್ನು ಹರಡುತ್ತಿರುವ ಮೋದಿಯವರು, ಸಮಾಜದಲ್ಲಿ ಒಡುಕು ಮೂಡಿಸುವ ಸ್ವಾರ್ಥ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ವಕ್ತಾರ ಹಾಗೂ ಸಚಿವ ದಿನೇಶ್ ಗುಂಡೂರಾವ್ (Lok Sabha Election 2024) ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ವಿಚಾರವಾಗಿ ಮೋದಿಯವರು ಸುಳ್ಳು ಹೇಳಿದ್ದಾರೆ. ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಎಲ್ಲಿ ಮುಸ್ಲಿಮರಿಗೆ ನೀಡಲಾಗಿದೆ? ಮೋದಿಯವರು ದಾಖಲೆ ಕೊಡಬೇಕು. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ತಿಳಿಸಿದರು.

10 ವರ್ಷ ಏನು ಕೆಲಸ ಮಾಡದೇ ಅಧಿಕಾರ ಅನುಭವಿಸಿರುವ ಮೋದಿಯವರಿಗೆ ಈಗ ಮುಸ್ಲಿಂ ಮೀಸಲಾತಿ ಎಂಬ ಕಪೋಲ ಕಲ್ಪಿತ ವಿಷಯ ಜ್ಞಾನೋದಯವಾಗಿದೆಯೇ? ಇಷ್ಟು ವರ್ಷ ಸುಮ್ಮನಿದ್ದು ಈಗ ಚುನಾವಣೆ ಸಮಯದಲ್ಲೇ ಸುಳ್ಳು ಹೇಳಿಕೆ ನೀಡುತ್ತಿರುವುದು ಏಕೆ? ಬಹುಮತ ಪಡೆಯುವುದು ಕಷ್ಟ ಎಂಬುದು‌ ಮೋದಿಯವರಿಗೆ ಸ್ಪಷ್ಟವಾದಂತಿದೆ. ಹೀಗಾಗಿ ಈ ರೀತಿಯ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

ದಲಿತರ ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಇದಕ್ಕೆ ಸಂಸತ್ತಿನ ಎರಡು ಸದನಗಳ ಒಪ್ಪಿಗೆ ಮೂಲಕ ಕಾಯ್ದೆ ತಿದ್ದುಪಡಿಯಾಗಬೇಕಾಗುತ್ತೆ. ಪ್ರಧಾನಿಯಾದವರು ಈ ಮಟ್ಟಕ್ಕೆ ಸುಳ್ಳು ಹೇಳಬಾರದು. ಕರ್ನಾಟಕದಲ್ಲಿ ಮುಸ್ಲಿಂರನ್ನು ಹಿಂದುಳಿದ ಜಾತಿಗಳ 2B ವರ್ಗಕ್ಕೆ ಸೇರಿಸಿದ್ದು 30 ವರ್ಷಗಳ ಹಿಂದಿನ ಕಥೆ. ಚೆನ್ನಪ್ಪ ರೆಡ್ಡಿಯವರ ಆಯೋಗದ ವರದಿ ಅನ್ವಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಗತಿ‌ ಗಳನ್ನು ಗಮನದಲ್ಲಿಟ್ಟುಕೊಂಡು ಅಂದು 2B ವರ್ಗಕ್ಕೆ ಸೇರಿಸಲಾಯಿತು. ಇಲ್ಲಿಯವರೆಗು ಯಾರು ಇದನ್ನು ಪ್ರಶ್ನೆ ಮಾಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಒಡಕು ಮೂಡಿಸಿ ಮತ ಪಡೆಯುವ ಉದ್ದೇಶದಿಂದ ಮೋದಿಯವರು ಪ್ರಸ್ತಾಪಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್‌ ಎನ್ನುತ್ತಿದ್ದ ಮೋದಿಯವರು ಈಗ ಹೇಳುತ್ತಿರುವುದು ಏನು? ಅವರ ಹೇಳಿಕೆಗಳನ್ನು ಗಮನಿಸಿದರೆ ಸಬ್ ಕಾ ಸಾಥ್ ಎನ್ನುವುದು ಶುದ್ಧ ಸುಳ್ಳು ಎಂದಾಯ್ತು. ಒಂದು ಕೋಮಿನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಮೋದಿಯವರಿಗೆ ಸಬ್ ಕಾ ಸಾಥ್ ಎಂದು ಹೇಳುವ ನೈತಿಕತೆ ಇದೆಯಾ. ಸಮಾಜದಲ್ಲಿ ಬೆಂಕಿ ಹಚ್ವುವ ಹೇಳಿಕೆಗಳನ್ನು ನೀಡುವುದರಲ್ಲಿ ಮೋದಿಯವರು ಯತ್ನಾಳ್ ಅವರನ್ನೂ ಮೀರಿಸುವ ಹಂತಕ್ಕೆ ಹೋದಂತಿದೆ‌ ಎಂದು ಟೀಕಿಸಿದ ಅವರು, ಸೋಲಿನ ಭೀತಿ ಮೋದಿಯವರನ್ನು ಕಾಡುತ್ತಿದೆ. ಹೀಗಾಗಿ ಮೋದಿಯವರು ಸುಳ್ಳಿನ ಆಶ್ರಯ ಪಡೆಯುತ್ತಿದ್ದಾರೆ. ಯಾವುದೇ ಆಧಾರದವಿಲ್ಲದೇ ದಲಿತರ ಮೀಸಲಾತಿ ಕಡಿತ ಮಾಡ್ತಿದೆ ಕಾಂಗ್ರೆಸ್ ಎಂದು ಹೇಳಿದ್ದಾರೆ. ದಾಖಲೆ ಸಮೇತ ಮಾತನಾಡಲಿ. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಲಿ ಎಂದು ಅವರು ಆಗ್ರಹಿಸಿದರು.‌

ಇದನ್ನೂ ಓದಿ: Karnataka Weather : ನಾಳೆ ಬೆಳಗಾವಿ, ಚಾಮರಾಜನಗರದಲ್ಲಿ ಮಳೆ ; ಉಳಿದೆಡೆ ಬಿಸಿಲ ಶಾಕ್‌

ನ್ಯಾಷನಲ್ ಒಬಿಸಿ ಕಮಿಷನ್‌ಗೆ ನಮ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯಾವ ಅಧಿಕಾರವೂ ಇಲ್ಲ. ಇಷ್ಟು ವರ್ಷದಿಂದ ನ್ಯಾಷನಲ್ ಓಬಿಸಿ ಅಧ್ಯಕ್ಷ ಏನು ಮಾಡ್ತಿದ್ರು? ಕೇವಲ ಗೊಂದಲ ಮೂಡಿಸುವುದಕ್ಕೆ ಮಾತ್ರ ಹೇಳಿಕೆ ಕೊಟ್ಟಿದ್ದಾರೆ. ಅವರು ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇಲ್ಲ, ನಾವು ಅವರಿಗೆ ಉತ್ತರ ಕೊಡುವ ಅಗತ್ಯವೂ ಇಲ್ಲ ಹಿಂದೆ ಬೊಮ್ಮಾಯಿ ಅವರು ಇದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡು ಸೋತು ಸುಣ್ಣವಾಗಿ ಹೋಗಿದ್ದಾರೆ. ಇದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡೇ ಬಿಜೆಪಿ 65ಕ್ಕೆ ಇಳಿದಿದೆ. ಅವಿವೇಕಿಯ ರೀತಿ ಮಾತನಾಡಿರುವ ನ್ಯಾಷನಲ್ ಒಬಿಸಿ ಅಧ್ಯಕ್ಷರು ಈಗ ಯಾಕೆ ಹಸ್ತಕ್ಷೇಪ ಮಾಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಗುಡುಗಿದರು.

Exit mobile version