ದಾವಣಗೆರೆ: ಮತದಾನದ ವೇಳೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ (G M Siddeshwar) ಅವರು ಎಡವಟ್ಟು ಮಾಡಿದ್ದಾರೆ. ಮತದಾನದ ಮಾರ್ಗಸೂಚಿ ಉಲ್ಲಂಘಿಸಿ ಪತ್ನಿಯ ಮತವನ್ನೂ (Lok Sabha Election 2024) ತಾವೇ ಹಾಕುವ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಮತದಾನ ಗೌಪ್ಯತೆ ಕಾಪಾಡದ ಹಿನ್ನೆಲೆ ಸಂಸದರ ವಿರುದ್ಧ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರ ಬದಲಿಗೆ ಸಿದ್ದೇಶ್ವರ್ ಅವರೇ ಮತ ಹಾಕುವ ಮೂಲಕ ಚುನಾವಣೆ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತಮ್ಮ ಮತವನ್ನು ಹಾಕಲೂ ಆಗದವರು ಕ್ಷೇತ್ರದಲ್ಲಿ ಆಡಳಿತ ಹೇಗೆ ನಡೆಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ದಾವಣಗೆರೆಯ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಗಾಯತ್ರಿ ಸಿದ್ದೇಶ್ವರ್ ಗೊಂದಲಕ್ಕೀಡಾಗಿದ್ದಾರೆ. ಈ ವೇಳೆ ಪತ್ನಿಗೆ ಸಹಾಯ ಮಾಡಲು ಹೋದ ಸಿದ್ದೇಶ್ವರ್ ಅವರು ತಾವೇ ಬಟನ್ ಒತ್ತಿ ಬಂದಿದ್ದಾರೆ.
ಚುನಾವಣಾಧಿಕಾರಿಯಿಂದ ದೂರು ದಾಖಲು
ಪತ್ನಿ ಮತದಾನ ಮಾಡಿದ್ದನ್ನು ಇಣುಕಿ ನೋಡಿದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಲಿಖಿತ ದೂರು ದಾಖಲಾಗಿದೆ. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ರಾಜೇಶ್ ಕುಮಾರ್ ಅವರು ಮತದಾನ ಗೌಪ್ಯತೆ ಕಾಪಾಡದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಗೆ ಸಂಸದರ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ
ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ
ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಅವರು ಮಂಗಳವಾರ ಔರಾದ್‌ನಲ್ಲಿ ಮತದಾನ (Lok Sabha Election 2024) ಮಾಡಿದರು.
ಬೀದರ್ ಜಿಲ್ಲೆಯ ಔರಾದ್‌ನ ನಾಲಂದ ಹೈಸ್ಕೂಲ್ ಬೂತ್ ನಂ.84ರ ಮತಗಟ್ಟೆಯಲ್ಲಿ ಕುಟುಂಬ ಸದಸ್ಯರ ಜತೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು.
ಇದನ್ನೂ ಓದಿ | Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ
ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ, ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ಯೋಜನೆಗಳನ್ನು ಜನರಿಗೆ ತಲುಪಿಸಿ ಯಶಸ್ವಿಯಾಗಿ ನನ್ನ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.