Site icon Vistara News

Lok sabha Election 2024: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನೇರವಾಗಿ ಮತಗಟ್ಟೆಗೆ ಬಂದ ನಾರಾಯಣ ಮೂರ್ತಿ

ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆಯ (Lok sabha Election 2024) ಎರಡನೇ ಹಂತದ (Second phase) ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಜನ ಸಾಮಾನ್ಯರಿಂದು ಹಿಡಿದು ಗಣ್ಯಾತಿಗಣ್ಯರು ಬಹಳ ಉತ್ಸುಕರಾಗಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲೂ ಮತದಾರರು ಬೆಳ್ಳಂ ಬೆಳಗ್ಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ಫೋಸಿಸ್‌ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ (Narayana Murthy) ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ (Sudha Murty) ಮತ ಚಲಾಯಿಸಿದರು. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 77 ವರ್ಷದ ನಾರಾಯಣ ಮೂರ್ತಿ ಇಂದು ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಆ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ ಸುಧಾ ಮೂರ್ತಿ, ನಾರಾಯಣ ಮೂರ್ತಿಯವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ನಾವು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ನೇರವಾಗಿ ಮತಗಟ್ಟೆಗೆ ಕರೆದುಕೊಂಡು ಬಂದಿದ್ದೇವೆ. ಮತದಾನದ ಬಳಿಕ ಅವರನ್ನು ನಾವು ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ತಮಗೂ ತುರ್ತಾಗಿ ಬೇರೆ ಕಡೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಮತದಾನ ಮಾಡಿದ ಬಳಿಕವಷ್ಟೇ ಹೋಗಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಐದು ವರ್ಷಗಳಲ್ಲಿ ಕೇವಲ ಒಂದು ಬಾರಿ ನಮಗೆ ನಮ್ಮ ಹಕ್ಕು ಚಲಾಯಿಸಿ ಸೂಕ್ತ ನಾಯಕನನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ ಎಂದು ಅವರು ಈ ವೇಳೆ ಮನವಿ ಮಾಡಿದರು.

ಇದನ್ನೂ ಓದಿ:Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

ಇನ್ನು ಅನಾರೋಗ್ಯದ ನಡುವೆಯೂ ಮತದಾನ ಮಾಡಿರುವ ನಾರಾಯಣ ಮೂರ್ತಿ ಅವರಿಗೆ ರಾಜ್ಯ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದೆ. ಎಕ್ಸ್‌ನಲ್ಲಿ ನಾರಾಯಣ ಮೂರ್ತಿಯವರ ವಿಡಿಯೋ ಹಂಚಿಕೊಂಡಿರುವ ಮುಖ್ಯ ಚುನಾವಣಾಧಿಕಾರಿ, ಅನಾರೋಗ್ಯವನ್ನೂ ಲೆಕ್ಕಿಸದೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ನಾರಾಯಣ ಮೂರ್ತಿಯವರು ದೇಶದ ಬಗೆಗಿನ ತಮ್ಮ ಬದ್ಧತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಎಲ್ಲರಿಗೂ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.

Exit mobile version