ಶಿವಮೊಗ್ಗ: ಪುತ್ರನಿಗೆ ಲೋಕಸಭಾ ಚುನಾವಣೆಯ (Lok Sabha Election 2024) ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಮನವೊಲಿಸಲು ಬಿಜೆಪಿ ಹೈಕಮಾಂಡ್ ಪ್ರಯತ್ನಿಸುತ್ತಿದೆ. ಆದರೂ, ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಅವರು ಹೇಳುತ್ತಿರುವುದರಿಂದ ದೆಹಲಿಗೆ ಬರಲು ಅಮಿತ್ ಶಾ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ದೆಹಲಿಗೆ ಆಗಮಿಸುವಂತೆ ಅಮಿತ್ ಶಾ ಕರೆ ಮಾಡಿದ್ದಾರೆ, ಅಲ್ಲಿಗೆ ಬಂದು ಭೇಟಿಯಾಗುವುದಾಗಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಗೃಹ ಮಂತ್ರಿ ಅಮಿತ್ ಶಾ ದೂರವಾಣಿ ಮೂಲಕ ನನ್ನ ಸಂಪರ್ಕ ಮಾಡಿದ್ದರು. ನೀವು ಇಷ್ಟು ಹಿರಿಯರಿದ್ದೀರಿ, ಯಾಕೆ ಚುನಾವಣೆಗೆ ನಿಂತಿದ್ದೀರಾ ಅಂತ ಕೇಳಿದರು. ಅಪ್ಪ-ಮಕ್ಕಳ ವ್ಯವಸ್ಥೆ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೇನೆ ಅಂತ ಹೇಳಿದ್ದೀನಿ. ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ಅಂತ ಅವರನ್ನು ಕೇಳಿದ್ದೇನೆ. ಆಗ ನಾನು ನಿಮ್ಮ ಬಳಿ ಬಂದು ಮಾತಾನಾಡಿದರೂ ಪ್ರಯೋಜನ ಆಗಿಲ್ಲ ಎಂದು ನಾಳೆ ದೆಹಲಿಗೆ ಬನ್ನಿ ಎಂದು ಅಮಿತ್ ಶಾ ಹೇಳಿದರು. ಅದಕ್ಕೆ ಬರುತ್ತೇನೆ ಅಂತ ಹೇಳಿರುವುದಾಗಿ ತಿಳಿಸಿದರು.
ಇದನ್ನೂ ಓದಿ | Lok Sabha Election 2024: ಡಿ.ಕೆ.ಸುರೇಶ್‌ದು ಸ್ವಾರ್ಥ, ಸುಲಿಗೆ, ಕೆಡುಕು ರಾಜಕಾರಣ ಎಂದ ಜೆಡಿಎಸ್!
ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ ಅಂತ ಹೇಳಿದ್ದೀನಿ, ನಿಮ್ಮ ಮಗನ ಭವಿಷ್ಯ ಬಗ್ಗೆ ಯೋಚನೆ ಮಾಡಿ ಅಂತ ಅವರು ಹೇಳಿದರು. ನಾಳೆ ರಾತ್ರಿ ದೆಹಲಿಗೆ ಹೋಗುತ್ತೇನೆ. ನನ್ನ ವಿಚಾರ ಅವರಿಗೆ ಒಪ್ಪಿಸಿ ಬರುತ್ತೇನೆ. ಅಮಿತ್ ಶಾಗೆ ಗೌರವ ಕೊಟ್ಟು ದೆಹಲಿಗೆ ಹೋಗ್ತೇನೆ. ದೊಡ್ಡವರು ಕರೆದಾಗ ಸೊಕ್ಕು ಮಾಡಬೇಕಾ? ಹಾಗಾಗಿ ಹೋಗುತ್ತಿದ್ದೇನೆ. ನಾಳೆ ಬೆಳಗ್ಗೆಯೇ ರಾಜ್ಯಾಧ್ಯಕ್ಷ ಬದಲಾವಣೆ ಮಾಡಿದರೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು.
ಕೆಲ ಕಾಂಗ್ರೆಸ್‌ನವರು ನನಗೆ ಸಪೋರ್ಟ್ ಮಾಡುತ್ತೇವೆ ಎಂದಿದ್ದಾರೆ. ನನ್ನ ವಿಚಾರ ಸರಿ ಇದ್ದರೆ ನನಗೆ ಬೆಂಬಲ ಕೊಡಿ ಅಂತ ಹೇಳಿದ್ದೀನಿ. ರಂಗ ಅಂತಾ ಹೋದ ಮೇಲೆ, ಸಿಂಗ ನಾ ಹತ್ತಿರ ಹೋಗ್ಲಾ? ನಾನು ಚುನಾವಣೆ ನಿಂತ ಮೇಲೆ ಕಾರ್ಯಕರ್ತರ ಗೌರವ ಹೆಚ್ಚಾಗಿದೆ. ನಾನು ಗೆದ್ದರೂ ಬಿಜೆಪಿಗೆ ಹೋಗುತ್ತೇನೆ ಎಂದು ತಿಳಿಸಿದರು.
ಅಮಿತ್ ಶಾ ತಡವಾಗಿ ಕರೆ ಮಾಡಿದ್ದಾರೆ ಅಂತ ನನಗೆ ಅನ್ನಿಸಿಲ್ಲ, ನಾನು ಚುನಾವಣೆಗೆ ಇಳಿಯಬೇಕಾದರೆ ಯೋಚನೆ ಮಾಡಿಯೇ ನಿಂತಿರುವುದು. ಮೋದಿ ದೇವರು ಸಿಕ್ಕಿದರೂ ಕಾಲಿಗೆ ಬಿದ್ದು, ನಾನೇ ನಿಮ್ಮನ್ನು ಪ್ರಧಾನಿ ಮಾಡುವೆ ಎಂದು ಹೇಳಿ ಬರುತ್ತೇನೆ. ಬ್ರಹ್ಮ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವೆ ಎಂದು ಹೇಳಿದರು.
ಇದನ್ನೂ ಓದಿ | Lok Sabha Election 2024: ಜೆಡಿಎಸ್ ಕಟ್ಟಿದ್ದೇ ನಾನು; ನನ್ನನ್ನೇ ಮಿಸ್ಟರ್ ದೇವೇಗೌಡ ಉಚ್ಚಾಟಿಸಿದ್ರು: ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳೋದೆಲ್ಲ ಬೊಗಳೆ… ನರೇಂದ್ರ ಮೋದಿ ಬಿಟ್ಟರೆ ಬೇರೆ ಯಾರೂ ಪ್ರಧಾನಿ ಆಗೋಕೆ ಸಾಧ್ಯವಿಲ್ಲ. ರಾಜ್ಯದಲ್ಲಿ 28ಕ್ಕೆ 27 ಬಿಜೆಪಿ ಗೆದ್ದು, ಜತೆಗೆ ನಾನೂ ಗೆದ್ದು ಮೋದಿಗೆ ಬೆಂಬಲ ಕೊಡುತ್ತೇನೆ. ಸಿಎಂ ಸೀಟು ಈಗಾಗಲೇ ಅಲುಗಾಡಿದೆ ಎಂದು ಟೀಕಿಸಿದರು.