ಹಾಸನ: ಹೈಕಮಾಂಡ್ ಸೂಚನೆಗೆ ಮಣಿದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಕೊನೆಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಪ್ರಚಾರ ಆರಂಭಿಸಿದ್ದಾರೆ. ವಿದ್ಯಾನಗರದಲ್ಲಿ ಬುಧವಾರ ಕರಪತ್ರಗಳನ್ನು ಹಂಚುವ ಮೂಲಕ ಪ್ರೀತಂಗೌಡ ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರು, ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನರೇಂದ್ರಮೋದಿ ಅವರು ಪ್ರಧಾನಮಂತ್ರಿ ಆಗಬೇಕು ಎಂದು ಪ್ರಚಾರ ಆರಂಭಿಸಿದ್ದೇನೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವ ಮೂಲಕ ಇಡೀ ದೇಶದಲ್ಲಿ 400ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು. ಹಿರಿಯರು ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಬೂತ್ ನಂಬರ್ 89 ರಿಂದ ಪ್ರಚಾರ ಆರಂಭಿಸಿದ್ದೇವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು. ಹಾಸನ ಲೋಕಸಭಾ ಕ್ಷೇತ್ರಕ್ಕೆ 2021 ಬೂತ್ ಬರುತ್ತವೆ. ನಾಳೆ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಲೂರಿನಲ್ಲಿ ಪ್ರಚಾರ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | Fact Check : ಹಿಂದುಗಳ ಮತ ಕಾಂಗ್ರೆಸ್‌ಗೆ ಬೇಡ; ಮುಸ್ಲಿಂ ಮತ ಮಾತ್ರವೇ ಸಾಕೆಂದರೇ ಸಿಎಂ ಸಿದ್ದರಾಮಯ್ಯ?
ನಾವು ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ. ಎನ್‌ಡಿಎ ಕೂಟ ಗೆಲ್ಲಿಸುವುದೇ ನಮ್ಮ ಗುರಿ. ಮೈತ್ರಿ ಅಭ್ಯರ್ಥಿಗೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ಮತವನ್ನು ಹೆಚ್ಚಿಗೆ ಕೊಡಿಸಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ. ಯಾರೇ ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಓಟು ಕೇಳಬೇಕು. ನಾನು ಸೋತಿರುವವನು, ನನ್ನ ಬಳಿ ಶ್ರಮ ಇದೆ. ಅವರ ಶಾಸಕರು ಇದ್ದಾರೆ, ಅವರ ಬಳಿ ಶಕ್ತಿ ಇದೆ ಎಂದು ಪ್ರಜ್ವಲ್ ರೇವಣ್ಣ, ಜೆಡಿಎಸ್ ಪಕ್ಷದ ಹೆಸರನ್ನು ಹೇಳದೆ ಪ್ರಚಾರ ಮಾಡಿದರು.
ನಾನು ಪ್ರೀತಿ ತೋರಿಸಿದರೆ ಕೆಲಸ ಮಾಡುವವನು, ಕಂಪ್ಲೇಂಟ್ ಮಾಡಿದರೆ ರಾಜಕೀಯ ಬೇಡ ಅಂತ ಮನೆಯಲ್ಲಿ ಕೂರುವೆ. ನನಗೆ ಯಾವ ರಾಜ್ಯ ನಾಯಕರೂ ಸೂಚನೆ ಕೊಟ್ಟಿಲ್ಲ. ಬಾವಿ ಕಪ್ಪೆಯಾಗಿ ಇರುವುದು ಬೇಡ ಎಂದು ಎರಡು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ. ಒಬ್ಬ ಸರ್ಕಾರಿ ನೌಕರರ ಮಗನನ್ನು ರಾಜ್ಯಮಟ್ಟದಲ್ಲಿ ಬೆಳೆಸಿರುವುದೇ ಬಿಜೆಪಿ ಪಕ್ಷ ಎಂದರು.
ಇದನ್ನೂ ಓದಿ | Lok Sabha Election 2024: ಕಾಂಗ್ರೆಸ್ – ಜೆಡಿಎಸ್ ಮಧ್ಯೆ ಮದ್ಯ, ಬಾಡೂಟ ಪಾಲಿಟಿಕ್ಸ್; ಏಟು – ಎದುರೇಟು!
ಬೂತ್ ಗೆದ್ದರೆ ದೇಶ ಗೆಲ್ಲಬಹುದು ಎಂಬ ಕಲ್ಪನೆ ನಮ್ಮದು. ನಾನು ಯಾರ ಒತ್ತಡಕ್ಕೂ ಮಣಿಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಯಾರು ಯಾರನ್ನು ಸಂಪರ್ಕ ಮಾಡುವುದು ಇರಲ್ಲ, ನಮ್ಮ ರಾಜ್ಯಾಧ್ಯಕ್ಷರ ಏನು ಸೂಚನೆ ಕೊಡುತ್ತಾರೆ ಅದರಂತೆ ಕೆಲಸ ಮಾಡುವೆ. ಈಗಾಗಲೇ ಬೂತ್ ಮಟ್ಟದ ಪದಾಧಿಕಾರಿಗಳು, ತಾಲೂಕು, ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನನ್ನ ವಿರೋಧಿಗಳು ಯಾರು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಆಗಾಗ ನಾನು ಹಾಸನಕ್ಕೆ ಬರುತ್ತಿರುತ್ತೇನೆ ಎಂದರು.