Site icon Vistara News

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

Lok Sabha Election 2024:

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿವಿಧೆಡೆ ಮತದಾರರಿಗೆ ಹಂಚಲು ಹಣ, ಮದ್ಯ, ಉಡುಗೊರೆಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಹಾವೇರಿ, ಬಾಗಲಕೋಟೆ ಹಾಗೂ ಅನೇಕಲ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 87.67 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋಟೆಬೆನ್ನೂರಿನಲ್ಲಿ 75 ಲಕ್ಷ ರೂ. ವಾಹನ ಜಪ್ತಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 75 ಲಕ್ಷ ರೂ. ಹಾಗೂ ವಾಹನವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಜಪ್ತಿ ಮಾಡಿದೆ. ಕಾರಿನಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ಹಣ ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ.

ಬಾದಾಮಿ ತಾಲೂಕಿನಲ್ಲಿ 6.87 ಲಕ್ಷ ರೂ. ವಶ

ಬಾಗಲಕೋಟೆ: ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ದಾಖಲೆ‌‌ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 6.87 ಲಕ್ಷ ರೂ.ಗಳನ್ನು ಬಾದಾಮಿ ತಾಲೂಕಿನ ಕುಳಗೇರಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ. ಆರ್.ಎಲ್.ನದಾಫ್ ನೇತೃತ್ವದ ಎಸ್.ಎಸ್.ಟಿ ತಂಡ ವಾಹನಗಳ ಪರಿಶೀಲನಾ ವೇಳೆ ಹಣ ವಶಕ್ಕೆ ಪಡೆದಿದೆ.

ನವಲಗುಂದದಿಂದ ಕೆರೂರಗೆ ಹೊರಟ ಕಾರಿನಲ್ಲಿ 2.83 ಲಕ್ಷ, ಗೂಡ್ಸ್ ವಾಹನದಲ್ಲಿ 1 ಲಕ್ಷ, ಹುಬ್ಬಳ್ಳಿಯಿಂದ ಕೆರೂರಿಗೆ ಹೊರಟ ವಾಹನದಲ್ಲಿ 2.40 ಲಕ್ಷ, ಶಿಗ್ಗಾಂವಿ ತಾಲೂಕಿನ ಪಾನಿಗಟ್ಟಿಯಿಂದ ಕೆರೂರಗೆ ಹೊರಟ ಬೊಲೆರೊದಲ್ಲಿ 1 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | Road Rage : ನಿಲ್ಲದ ರೋಡ್‌ ರೇಜ್; ನಿವೃತ್ತ ಬ್ರಿಗೇಡಿಯರ್ ಕಾರು ಅಡ್ಡಗಟ್ಟಿ ಬೆಲ್ಟ್‌ನಿಂದ ಹೊಡೆದು ಹಲ್ಲೆ

ಆನೇಕಲ್‌ನಲ್ಲಿ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 5.28 ಲಕ್ಷ ವಶಕ್ಕೆ

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್‌ನಲ್ಲಿ ದಾಖಲೆ ಇಲ್ಲದೆ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 5.28 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಂಪಲಘಟ್ಟ ರಮೇಶ್ ಎಂಬುವವರು, ಹೊಂಪಲಘಟ್ಟ ಕಡೆಯಿಂದ ಆನೇಕಲ್ ಮಾರ್ಗವಾಗಿ ಹಣ ತೆಗೆದುಕೊಂಡು ಬರುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಯನಗರದಲ್ಲಿ ಸೀಜ್‌ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಚುನಾವಣಾ ಸಮಯದಲ್ಲಿ (Lok Sabha Election 2024) ಹಣದ ಹೊಳೆಯೇ (Lok Sabha Election 2024) ಹರಿಯುತ್ತದೆ. ಸದ್ಯ ಜಯನಗರ ಚೆಕ್‌ಪೋಸ್ಟ್‌ನಲ್ಲಿ ಕಾರೊಂದರಲ್ಲಿ ಸಿಕ್ಕಿದ ಕೋಟ್ಯಂತರ ರೂ. ಹಣದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಅಧಿಕಾರಿ ಎನ್‌ ಮಂಜುನಾಥ್‌ ಕೊಟ್ಟ ದೂರನ್ನು ಆಧರಿಸಿ ಏ.15ರಂದು ಸ್ಕೂಟರ್‌ ಹಾಗೂ ಕಾರು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಇಬ್ಬರಿಗೂ ನೋಟಿಸ್‌ ನೀಡಿದ್ದಾರೆ.

ವಶಕ್ಕೆ ಪಡೆದಿರುವ ಕೋಟ್ಯಂತರ ರೂ. ಹಣವನ್ನು ನಗರ ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಅವರು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಕಾರಿನಲ್ಲಿ ಸಿಕ್ಕ ಹಣವನ್ನು ಎಣಿಕೆ ಮಾಡಿದಾಗ 1,34,99,000 ರೂ. ಹಣ ಪತ್ತೆಯಾಗಿದ್ದು, ಜತೆಗೆ ಬಿಬಿಎಂಪಿಗೆ ಸಂಬಂಧಿಸಿದ ಕೆಲ ದಾಖಲೆಗಳು ಸಿಕ್ಕಿವೆ. ಇವೆಲ್ಲವನ್ನೂ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕರಣದ ವರದಿಯನ್ನು ಕೊಟ್ಟಿದ್ದಾರೆ.

ಇನ್ನೂ ಕ್ಲಾಸ್ ಒನ್ ಗುತ್ತಿಗೆದಾರನಿಗೆ ಸೇರಿದ ಹಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವು ಯಾವುದಾದರು ಪಕ್ಷಕ್ಕೆ ಸೇರಿದ್ದಾ? ವೈಯಕ್ತಿಕ ವ್ಯವಹಾರದ್ದ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸೀಜ್‌ ಮಾಡಿರುವ ಸ್ಕೂಟರ್‌ ಹಾಗೂ ಕಾರಿನ ಮಾಲೀಕರಾದ ಸೋಮಶೇಖರ್ ಮತ್ತು ಧನಂಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಆ ದಿನ ನಡೆದಿದ್ದು ಏನು? ದೂರಿನಲ್ಲಿ ಏನಿದೆ?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಪ್ಲೈಯಿಂಗ್‌ ಸ್ಕ್ವಾಡ್‌ ತಂಡ 3ರ ಟೀಮ್‌ ಲೀಡರ್‌ ಆಗಿ ನೇಮಕಗೊಂಡಿರುವ ಮಂಜುನಾಥ್‌ ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಆ ದೂರಿನನ್ವಯ ಏ.13ರ ಬೆಳಗ್ಗೆ 11:50ರ ಸುಮಾರಿಗೆ ಜಯನಗರ 4ನೇ ಬ್ಲಾಕ್‌ ಸಮೀಪ ಅಪರಿಚಿತ ವ್ಯಕ್ತಿಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಹೆಚ್ಚಿನ ಪ್ರಮಾಣದ ನಗದನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ನೋಡಲ್‌ ಅಧಿಕಾರಿ ನಿಖಿತ ಚಿನ್ನಸ್ವಾಮಿ ಅವರು ತೆರಳಿದ್ದರು.

ಈ ವೇಳೆ ನೀಲಿ ಬಣ್ಣದ ಆಕ್ಸಸ್‌ ಗಾಡಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಗ್‌ ಇಟ್ಟುಕೊಂಡಿದ್ದ. ನೋಡಲ್‌ ಅಧಿಕಾರಿ ನಿಖಿತ ಅವರು ಆತನ ಬಳಿ ಹೋಗಿ ವಿಚಾರಿಸಲು ಮುಂದಾಗುತ್ತಿದ್ದಂತೆ, ಸ್ಕೂಟರ್‌ ಹಾಗೂ ಹಣದ ಬ್ಯಾಗ್‌ ಬಿಟ್ಟು ಪರಾರಿ ಆಗಿದ್ದ. ಅದೇ ರಸ್ತೆಯಲ್ಲಿದ್ದ ಕೆಂಪು ಬಣ್ಣದ ವೋಕ್ಸ್‌ ವ್ಯಾಗನ್‌ ಕಾರು ಮತ್ತು ರಿಜಿಸ್ಟೇಷನ್‌ ನಂಬರ್‌ ಇಲ್ಲದ ಬಿಳಿ ಬಣ್ಣದ ಬೆಂಜ್‌ ಕಾರಿನಲ್ಲೂ ಗರಿ ಗರಿ ನೋಟು ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಮೊದಮೊದಲು ಬ್ಯಾಗ್‌ನಲ್ಲಿ ಏನಿದೆ ತೋರಿಸಿ ಎಂದಾಗ ಮಾವಿನ ಹಣ್ಣಿನ ಬ್ಯಾಗ್‌ ಎಂದಿದ್ದರು. ಯಾವಾಗ ನೋಡೆಲ್‌ ಅಧಿಕಾರಿ ನಿಖಿತ ಅವರು ಕಾರು ಪರಿಶೀಲನೆ ಮಾಡಲು ಹೋದಾಗ ಕಾರಲ್ಲಿದ್ದ ಐವರು ಕಾಲ್ಕಿತ್ತಿದ್ದರು. ಒಟ್ಟು 1,34,99,000 ಹಣ ಪತ್ತೆಯಾಗಿದೆ. ಜತೆಗೆ ವೋಕ್ಸ್‌ ವ್ಯಾಗನ್‌ ಕಾರಲ್ಲಿ ಬಿಬಿಎಂಪಿ ದಾಖಲಾತಿಗಳು ಹಾಗೂ ರಿಜಿಸ್ಟೇಷನ್‌ ನಂಬರ್‌ ಇಲ್ಲದ ಕಾರಲ್ಲಿ ಒಂದು ಮೊಬೈಲ್‌, ಒಂದು ಕಾರ್ಡ್‌ ಪೌಚ್‌ ದೊರೆತಿದೆ. ಇದೆಲ್ಲವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

Exit mobile version