ಹುಬ್ಬಳ್ಳಿ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರ ಕೈಗೆ ಚೊಂಬು ಕೊಡೋದನ್ನು ಕಾಂಗ್ರೆಸ್ (Congress) ನಿಲ್ಲಿಸಲಿಲ್ಲ. ಪರಿಣಾಮ ಜನರೂ ಕಾಂಗ್ರೆಸಿಗರ ಕೈಗೆ ಚೊಂಬು ಕೊಡುತ್ತಾ ಬಂದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ (Lok Sabha Election 2024) ಮಾಡಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಡ್ಡಾಡೋದು ಅಭ್ಯಾಸವಾಗಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ 14 ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಿ ಜನರು ಕೈಯಲ್ಲಿ ಚೊಂಬು ಹಿಡಿಯುವುದನ್ನು ನಿಲ್ಲಿಸಿದ್ದಾರೆ ಎಂದು ಸಚಿವ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು
ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದ್ದಲ್ಲದೆ, ಅವರ ವಿರುದ್ಧ ಗೆದ್ದವರಿಗೆ ಪದ್ಮವಿಭೂಷಣ ಕೊಟ್ಟು ಸತ್ಕರಿಸುವ ಮೂಲಕ ದಲಿತರ ಕೈಗೆ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು ಎಂದು ಸಚಿವ ಜೋಶಿ ಹರಿಹಾಯ್ದರು.
ಇದೆಲ್ಲದರ ಪರಿಣಾಮ ಜನರೂ ನಿಮ್ಮ ಕೈಗೆ ಚೊಂಬು ಕೊಟ್ಟು ಕಳಿಸುತ್ತಿದ್ದಾರೆ. ದೇಶದ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಎರಡೇ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Lok Sabha Election: ರಾಜ್ಯಾದ್ಯಂತ 1 ಗಂಟೆ ವೇಳೆಗೆ 38.23% ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?
ಚತ್ತಿಸಗಢ, ರಾಜಸ್ಥಾನ, ಮಧ್ಯಪ್ರದೇಶ ಹೀಗೆ ಎಲ್ಲೆಡೆಯೂ ಹೀನಾಯವಾಗಿ ಸೋಲಿಸಿ ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳದಂತೆ ಜನ ನಿಮ್ಮ ಕೈಗೆ ಚೊಂಬು ಕೊಟ್ಟಿದ್ದಾರೆ ನೆನಪಿಟ್ಟುಕೊಳ್ಳಿ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.