Site icon Vistara News

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Union Minister Pralhad Joshi latest statement in hubli

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ (Congress Party) ಮೂರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸವಾಲು ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ಕ್ಷೇತ್ರಗಳನ್ನೂ ದಾಟುವುದಿಲ್ಲ ಎಂದು ಭವಿಷ್ಯ ನುಡಿದರು. ಒಂದು ವೇಳೆ ಮೂರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೆ ಅವರು ಹೇಳಿದಂತೆ ಕೇಳುವೆ ಎಂದು ಅವರು ಸವಾಲು ಹಾಕಿದರು.

ದೇಶಾದ್ಯಂತ ಕಾಂಗ್ರೆಸ್ 40 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಿದೆ. ಹಾಗಿರುವಾಗ ಕರ್ನಾಟಕದಲ್ಲಿ ಹೇಗೆ 20 ಕ್ಷೇತ್ರಗಳನ್ನು ಗೆಲ್ಲುತ್ತದೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ಲೋಕಸಭಾ ಚುನಾವಣೆ ಬಳಿಕ ಸಿಎಂ-ಡಿಸಿಎಂ ಬಣದಲ್ಲಿನ ಆಂತರಿಕ ಗೊಂದಲದಿಂದ ರಾಜ್ಯ ಸರ್ಕಾರ ಅದಾಗೇ ಪತನಗೊಳ್ಳಬಹುದು. ಆದರೆ ಸರ್ಕಾರದ ಪತನದಲ್ಲಿ ಬಿಜೆಪಿ ಪಾತ್ರ ಇರುವುದಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಏ.15ರಂದು ನಾಮಪತ್ರ ಸಲ್ಲಿಕೆ

ಧಾರವಾಡ ಲೋಕಸಭೆ ಕ್ಷೇತ್ರಕ್ಕೆ 5ನೇ ಬಾರಿ ಸ್ಪರ್ಧೆ ಬಯಸಿ ಇದೇ ಏ.15ರಂದು ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಹುಬ್ಬಳ್ಳಿಯ ಶಿವಾಜಿ ಸರ್ಕಲ್‌ನಿಂದ ಅಸಂಖ್ಯಾತ ಕಾರ್ಯಕರ್ತರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸುವೆ ಎಂದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಶಾಸಕ ಅರವಿಂದ ಬೆಲ್ಲದ್, ಮಹೇಶ ತೆಂಗಿನಕಾಯಿ, ಶಂಕರಣ್ಣ ಮುನವಳ್ಳಿ ಸೇರಿದಂತೆ ಮುಂತಾದ ಪ್ರಮುಖರು ಅಂದು ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Tumkur News: ಶಿರಾದಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಅಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Exit mobile version