ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ಜತೆಗೆ ರಾಜಕೀಯ ನಾಯಕರಿಂದ ದ್ವೇಷ ಭಾಷಣ, ವೈಯಕ್ತಿಕ ಟೀಕೆಗಳೂ ಹೆಚ್ಚಾಗುತ್ತಿವೆ. ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರನ್ನು ಟಾರ್ಗೆಟ್ ಮಾಡದಂತೆ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡರಿಗೆ ಇತ್ತೀಚೆಗೆ ಕಿವಿಮಾತು ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥ ಯದುವೀರ್ ಒಡೆಯರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿರುವುದು ಕಂಡುಬಂದಿದೆ.
ಮಡಿಕೇರಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಂ.ಲಕ್ಷ್ಮಣ್ ಅವರು, ಯದುವೀರ್ ಒಡೆಯರ್ ರಾಜವಂಶಸ್ಥರ ಕುಡಿ ಅಲ್ಲ, ದತ್ತು ಪುತ್ರ. ಅವರು ಒಡೆಯರ್ ಫ್ಯಾಮಿಲಿ ಅಲ್ಲ. ಯದುವೀರ್ ಆದ್ಯತೆ ಏನು? ಕೇವಲ ಕೈ ಎತ್ತಿದ್ರೆ ಮಾತ್ರ ಗೆಲ್ಲಬೇಕಾ? ಪಾರ್ಲಿಮೆಂಟ್‌ನಲ್ಲಿ ಹೆಡ್ ಕೌಂಟ್‌ಗೆ ಮಾತ್ರ ಸಂಸದರನ್ನು ಆಯ್ಕೆ ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ.
ನಾವು ಕೊಟ್ಟ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. 10 ತಿಂಗಳಲ್ಲಿ ಕೊಡಗಿನಲ್ಲಿ ಯಾವುದಾದರೂ ಕೋಮು ಗಲಭೆ ನಡೆದಿದೆಯೇ? ಕೋಮು ದ್ವೇಷ ಹರಡುವಂತ ವ್ಯವಸ್ಥೆ ಇದ್ದದ್ದು ಬಿಜೆಪಿ ಅಧಿಕಾರದಲ್ಲಿ. ಆದರೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿದೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆ ಸಮಯದಲ್ಲಿ ಪ್ರತಾಪ್ ಸಿಂಹ ಗೆದ್ದರೆ ಕೊಡಗನ್ನು ಸ್ವಿಟ್ಜರ್ಲ್ಯಾಂಡ್, ಮೈಸೂರನ್ನ ಪ್ಯಾರಿಸ್ ಮಾದರಿಯ ನಗರ ಮಾಡುತ್ತೀವಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೈಸೂರಿನಲ್ಲಿ ಏರ್‌ಪೋರ್ಟ್, ಮಡಿಕೇರಿಯಲ್ಲಿ ಮಿನಿ ಏರ್‌ಪೋರ್ಟ್ ಮಾಡುವುದು ಬಿಜೆಪಿ ಉದ್ದೇಶವಾಗಿತ್ತು. ಆದರೆ ಯಾವುದು ಕೂಡ ಬಿಜೆಪಿ ಸರ್ಕಾರದಲ್ಲಿ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಸಾಕಷ್ಟು ಸಮಸ್ಯೆಗಳು ಇದ್ದರೂ ಬಿಜೆಪಿ ಸಂಸದ ಸರಿಯಾಗಿ ಸ್ಪಂದಿಸಿಲ್ಲ. ಕೇಂದ್ರದಲ್ಲಿ ರಾಜ್ಯದಲ್ಲಿ ಅವರದೇ ಸರ್ಕಾರ ಇದ್ದರೂ ಏನು ಕೆಲಸ ಮಾಡಿಲ್ಲ. ಹತ್ತು ವರ್ಷ ಕೊಡಗಿಗೆ ನಾನೇನು ಮಾಡಿಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ. ಟಿಕೆಟ್ ಕೈ ತಪ್ಪಿದ ಬಳಿಕ ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಅವರು ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!
ಜಾತಿ ಪ್ರಮಾಣ ಪತ್ರ ತೋರಿಸಿದ್ದ ಎಂ. ಲಕ್ಷ್ಮಣ್
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ʼಒಕ್ಕಲಿಗʼ ಅಲ್ಲ ಎಂದು ಬಿಜೆಪಿಯವರು ಒಕ್ಕಲಿಗರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ನಾನು ಒಕ್ಕಲಿಗ ಎಂದು ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಇತ್ತೀಚೆಗೆ ಮಾಧ್ಯಮಗಳ ಮುಂದೆ ಎಂ.ಲಕ್ಷ್ಮಣ್ ಅವರು ಜಾತಿ ಪ್ರಮಾಣ ಪತ್ರ ತೋರಿಸಿದ್ದರು. ಅಲ್ಲದೇ ಕಾಂಗ್ರೆಸ್ ನಾಯಕರು ಕೂಡ ಒಕ್ಕಲಿಗ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜಾತಿ ಅಸ್ತ್ರ ಪ್ರಯೋಗ ಮಾಡಿದ್ದಾರೆ.