ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟ ದಿನದಿಂದ ಜಿಲ್ಲೆಯಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಹೀಗಾಗಿ ಭಿನ್ನಮತ ಶಮನಗೊಳಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಶನಿವಾರ ಮೈತ್ರಿ ಸಮನ್ವಯ ಸಭೆ ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ಕಸರತ್ತು ನಡೆಸಿದ್ದು, ಚುನಾವಣೆಯಲ್ಲಿ (Lok Sabha Election 2024) ಮೈತ್ರಿ ಅಭ್ಯರ್ಥಿ ಗೆಲುವಿಗೆ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲು ಸೂಚಿಸಿದ್ದಾರೆ.
ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬಿಜೆಪಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಉಪಸಭಾಪತಿ ಪ್ರಾಣೇಶ್ ಭಾಗಿಯಾಗಿದ್ದರು.
ತುರ್ತು ಸಮನ್ವಯ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಬಿಜೆಪಿ-ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ 28ಕ್ಕೆ 28 ಸೀಟ್ ಗೆಲ್ಲುತ್ತೆ ಎಂದು ಗ್ಯಾರಂಟಿ ಕೊಡುತ್ತೀನಿ. ನಮಗೆ ಹಾಸನ ಎಷ್ಟು ಮುಖ್ಯವೋ ಮೈಸೂರು ಅಷ್ಟೇ ಮುಖ್ಯ. ಅಲ್ಲಿ ಯದುವೀರ್ ಅವರನ್ನು ನಿಲ್ಲಿಸಿದ್ದೇವೆ. ನಮ್ಮ ಮಾಜಿ ಶಾಸಕರು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಪ್ರತಿದಿನ ಹಾಸನದಲ್ಲೇ ಇರಬೇಕು ಎಂದು ನಿರೀಕ್ಷಿಸುವುದಿಲ್ಲ. ಅವರು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Karnataka Drought: ಬರ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪುಗಳ ಪಟ್ಟಿಯನ್ನೇ ಇಟ್ಟ ಆರ್. ಅಶೋಕ್!
ಏ.1 ರಂದು ಹಾಸನ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೆವು. ಸಭೆಯಲ್ಲಿ ಪ್ರೀತಂಗೌಡ ಅವರು ಭಾಗವಹಿದ್ದರು. ಅಲ್ಲಿ ಚರ್ಚಿಸಿ ಅಗತ್ಯವಿರುವ ಎಲ್ಲಾ ತಯಾರಿ ಮಾಡಿದ್ದೇವೆ. ನೀವು ಪದೇ ಪದೇ ಏಕೆ ಈ ವಿಷಯ ಪ್ರಸ್ತಾಪ ಮಾಡುತ್ತಿಲ್ಲ ಎಂದು ತಿಳಿಯುತ್ತಿಲ್ಲ. ನಾನು ಉತ್ತರಪ್ರದೇಶದಿಂದ ಇಪ್ಪತ್ತು ವರ್ಷ ಪ್ರತಿನಿಧಿಸಿದ್ದೇನೆ. ಈಗ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಎಲ್ಲಿ ನಿಯೋಜಿಸಿದ್ದಾರೆ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರೀತಂಗೌಡ ಪದೇ ಪದೇ ಹಾಸನಕ್ಕೆ ಬಂದರೆ ನಾವೇ ಅವರನ್ನು ಪ್ರಶ್ನೆ ಮಾಡುತ್ತೇವೆ. ಕರ್ನಾಟಕದ ಒಬ್ಬ ಪ್ರಭಾರಿ ದಿನವೂ ಉತ್ತರ ಪ್ರದೇಶಕ್ಕೆ ಹೋಗಲು ಆಗುತ್ತಾ? ಫೆ.15 ರಂದು ಪ್ರಭಾರಿ ಆಗಿರುವ ಬಂದಿರುವ ನಾನು ಇಲ್ಲೇ ಇದ್ದೇನೆ. ಹಾಗೆಯೇ ಅವರು ಮೈಸೂರಿನ ಪ್ರಭಾರಿ ಆಗಿ ಅಲ್ಲಿಗೆ ಹೋಗಿದ್ದಾರೆ. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಜಾಗದಲ್ಲಿ ಇರಲು ಹೇಗೆ ಸಾಧ್ಯ? ಹಾಗಾಗಿ ಅವರು ಅವರು ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ ಹಾಕುವಂತೆ ಪ್ರೀತಂಗೌಡ ಬೆಂಬಲಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ವಿಚಾರ. ನಾವು ಹಾಸನದಲ್ಲಿ ಸಮೀಕ್ಷೆ ನಡೆಸಿದ್ದೇವೆ, ಆ ರೀತಿ ಎಲ್ಲೂ ಕಂಡುಬಂದಿಲ್ಲ. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ನಾನು ಇಲ್ಲಿನ ಕೆಲಸ ಬಿಟ್ಟು ಉತ್ತರಪ್ರದೇಶಕ್ಕೆ ಹೋದರೆ ನಮ್ಮ ಪಕ್ಷ ಅದನ್ನು ಇಷ್ಟಪಡುತ್ತದೆಯೇ? ನಾವು ಒಂದು ಸಂಘಟನೆ, ನಮಗೆ ಎಲ್ಲಿ ಕೆಲಸ ನೀಡಲಾಗುತ್ತದೆಯೋ ಅಲ್ಲಿ ಅವರ ಕೆಲಸದ ಮೇಲೆ ಮೌಲ್ಯಮಾಪನ ನಡೆಯುತ್ತದೆ. ಅವರು ಮೈಸೂರು ಬಿಟ್ಟು ಬಂದರೆ ನಾನು ಅವರ ಮೇಲೆ ವಿಚಾರಣೆ ನಡೆಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆಯೇ ಗ್ಯಾರಂಟಿ ಇಲ್ಲ. ಲೋಕಸಭಾ ಚುನಾವಣೆ ನಂತರ ಕರ್ನಾಟಕ ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ. ಅವರ ಸರ್ಕಾರವೇ ಐದು ಗ್ಯಾರಂಟಿಗಳನ್ನು ಬಂದ್ ಮಾಡಲಿದೆ. ಅವರ ಬಳಿ ಹಣವೇ ಇಲ್ಲ, ಈಗ ಅವರು ಮಾಡುತ್ತಿರುವ ಘೋಷಣೆಗಳೆಲ್ಲಾ ಚುನಾವಣೆ ಘೋಷಣೆ. ನಾವು ಹತ್ತು ವರ್ಷದಿಂದ ಏನು ಹೇಳಿದ್ದೆವೋ ಆ ಕೆಲಸ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ತುಂಬಾ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಮೋದಿ ಸರ್ಕಾರ ತರಬೇಕು ಎಂದು ಅವರು ಕೆಲಸ ಮಾಡುತ್ತಿದ್ದಾರೆ. ನನ್ನಷ್ಟೇ ಉತ್ಸಾಹದಲ್ಲಿ ಅವರೂ ಕೆಲಸ ಮಾಡುತ್ತಿದ್ದಾರೆ. ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮಣ್ಣ ಪರ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ವಿಚಾರದಲ್ಲಿ ಸಣ್ಣ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದೇನೆ. ಅವರು ಕೂಡ ನರೇಂದ್ರಮೋದಿ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯದಿದ್ದರೆ ಆಗ ಅವರ ಬಗ್ಗೆ ಪ್ರಶ್ನಿಸಿ. ಅವರು ಮೋದಿ ಮತ್ತು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಅವರು ಗೆದ್ದ ನಂತರ ಬಿಜೆಪಿ ಜೊತೆ ವಿಲೀನ ಆಗುತ್ತದೆ ಎಂದೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಚುನಾವಣೆ ಐತಿಹಾಸಿಕವಾಗಲಿದೆ. ನಮ್ಮ ಎದುರಾಳಿ ಬಳಿ ಅಪಾರವಾದ ಸಂಪತ್ತು ಇದೆ. 500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವವರು ಯಾವ ವ್ಯಾಪಾರ ಮಾಡುತ್ತಿದ್ದಾರೆ ತಿಳಿಯದು. ಅವರ ಎದುರಿಗೆ ತಮ್ಮ ಜೀವನ ಪೂರ್ತಿ ನಿಸ್ವಾರ್ಥ ಸೇವೆ ಮಾಡಿರುವ ಮಂಜುನಾಥ್ ಅವರು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅವರ ಬಳಿ ಚುನಾವಣೆ ನಡೆಸಲು ಹಣವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹೀನಾಯವಾಗಿ ಸೋಲಲಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ನಂತರ ಮೈತ್ರಿ ಮುಂದುವರಿಕೆ ವಿಚಾರ ಪ್ರತಿಕ್ರಿಯಿಸಿ, ನಾವು ಕಂಟ್ರ್ಯಾಕ್ಟ್ ಮದುವೆಯಾಗುವುದಿಲ್ಲ. ಮದುವೆ ಎನ್ನುವುದು ನಮಗೆ ಧಾರ್ಮಿಕವಾದ ಕಾರ್ಯ. ದೀರ್ಘಕಾಲ ಜೊತೆಯಾಗಿ ನಡೆಯಲು ಸಂಬಂಧ ಬೆಳೆಸುತ್ತೇವೆ. ಎರಡು ಕೈಸೇರಿದರೆ ಚಪ್ಪಾಳೆ ಆಗುತ್ತದೆ. ನಾವು ಸಹ ಈ ಸಂಬಂಧ ಮುಂದುವರೆಯುವುದನ್ನು ಬಯಸುತ್ತೇವೆ ಎಂದು ಹೇಳಿದರು.
ಎಲ್ಲಾ ಒಗ್ಗಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದೇವೆ: ಪ್ರಜ್ವಲ್ ರೇವಣ್ಣ
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಲೋಕಸಭಾ ಚುನಾವಣೆ ಉಸ್ತುವಾರಿ ಆಗಿರುವ ರಾಧಾಮೋಹನ್ ದಾಸ್ ಅವರು ಒಂದೊಂದೇ ತಾಲೂಕಿನ ಬಗ್ಗೆ ಮಾಹಿತಿ ಪಡೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟನ್ನು ಮೂಡಿಸಿದ್ದಾರೆ. ನಮ್ಮ ಗುರಿ 400ಕ್ಕೂ ಹೆಚ್ಚು ಸೀಟ್ ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು. ಎಲ್ಲಾ ಒಗ್ಗಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಪ್ರೀತಂಗೌಡ ಅವರಿಗೆ ಮೈಸೂರು ಉಸ್ತುವಾರಿ ಕೊಟ್ಟಿದ್ದಾರೆ. ಅಲ್ಲಿಯೂ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ಅದಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಪ್ರಚಾರದಲ್ಲಿ ನಮ್ಮ ಜೊತೆಯೇ ಇರಲಿದ್ದು, ಒಗ್ಗಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ. ಅದನ್ನು ರಾಧಾ ಮೋಹನ್ ದಾಸ್‌ಜಿ ಮಾತನಾಡಿದ್ದಾರೆ ಎಂದು ತಿಳಿಸಿದರು.
ಎಚ್.ಡಿ.ದೇವೇಗೌಡರ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಲಘುವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಇವತ್ತು ಜಿಲ್ಲೆಯ ಜನ ಅಲ್ಲ, ರಾಜ್ಯದ ಜನ ನೋಡುತ್ತಿದ್ದಾರೆ. ಅವರು ಒಬ್ಬ ಮುತ್ಸದ್ದಿ ರಾಜಕಾರಣಿ, ಕರ್ನಾಟಕದ ಆಸ್ತಿ. ಅಂತಹವರ ಸಾವಿನ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ಇದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಅವರಿಗೆ ಸರಿಯಾದ ಉತ್ತರವನ್ನು ಜನರು ಜೂ.4 ರಂದು ಕೊಡುತ್ತಾರೆ ಎಂದು ಕಿಡಿಕಾರಿದರು.
ದಾವಣಗೆರೆಯಲ್ಲಿ ರೆಬಲ್ಸ್ ತಂಡದೊಂದಿಗೆ ಸಭೆ
ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಶಮನಕ್ಕೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಮುಂದಾಗಿದ್ದು, ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಮಾಜಿ ಸಚಿವ ಎಂಪಿ.ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್ ಹಾಗೂ ಕರುಣಾಕರ ರೆಡ್ಡಿ, ಮಾಡಾಳ್ ಮಲ್ಲಿಕಾರ್ಜುನ್ ಸೇರಿ ಬಿಜೆಪಿ ರೆಬೆಲ್ಸ್ ಟೀಂ ಜತೆ ಅಗರ್ವಾಲ್ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ | KS Eshwarappa: ಮೋದಿ ಚಿತ್ರ ನಾನೂ ಬಳಸುವೆ: ಕೋರ್ಟ್ ಮೊರೆ ಹೋದ ಈಶ್ವರಪ್ಪ
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರದಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ರೆಬಲ್ಸ್ ತಂಡ ಆಕ್ರೋಶಗೊಂಡಿತ್ತು. ಗಾಯತ್ರಿ ಸಿದ್ದೇಶ್ವರ್‌ಗೆ ನೀಡಿದ ಟಿಕೆಟ್ ವಾಪಸ್ ಪಡೆಯುವಂತೆ ರೆಬೆಲ್ಸ್ ಟೀಂ ಆಗ್ರಹಿಸುತ್ತಿದೆ. ಮಾಜಿ ಸಿಎಂ ಬಿಎಸ್‌ವೈ ಮಾತುಕತೆ ಬಳಿಕವು ಭಿನ್ನಮತ ಶಮನವಾಗಿರಲಿಲ್ಲ. ಹೀಗಾಗಿ ಅಭ್ಯರ್ಥಿ ಪರವಾಗಿ ಓಡಾಡಿ ಬಿಜೆಪಿ ಗೆಲ್ಲಿಸಲು ರಾಧಾ ಮೋಹನ್ ದಾಸ್ ಸೂಚಿಸಿದ್ದಾರೆ.
ಸಭೆ ಬಳಿಕ ರಾಧಾ ಮೋಹನ್ ಅಗರ್ವಾಲ್ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ.
ಚುನಾವಣೆ ಸಿದ್ಧತೆ ಹಿನ್ನೆಲೆ ಈ ಸಭೆ ಕರೆಯಲಾಗಿದೆ. ಪ್ರತಿಯೊಬ್ಬರು ನಿರಂತರವಾಗಿ ದಾವಣಗೆರೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಹರಪನಹಳ್ಳಿ ತಾಲೂಕು ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ತಾಲೂಕು ಅಧ್ಯಕ್ಷರನ್ನು ಬದಲಾವಣೆ ಮಾಡಲು ಆಗಲ್ಲ. ನಮ್ಮಲ್ಲಿ ಯಾರು ಕೂಡಾ ಅಭ್ಯರ್ಥಿ ಬಗ್ಗೆ ಅಥವಾ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿಲ್ಲ. ಪ್ರತಿಯೊಬ್ಬರು ಗಾಯತ್ರಿ ಸಿದ್ದೇಶ್ವರ್ ಪರ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.