Site icon Vistara News

ಮೋದಿಗೆ ಮತ ಹಾಕಬೇಡಿ ಎಂದ ರೈತ ಮುಖಂಡರಿಗೆ ಚಾಮರಾಜನಗರ ರೈತರಿಂದ ಕ್ಲಾಸ್!

Lok Sabha Election

Lok Sabha Election: Farmer Leaders Campaign Against Narendra Modi In Chamarajanagar, Villagers Fight Back

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಪ್ರಚಾರ ಮಾಡುತ್ತಿದ್ದ ರೈತ ಮುಖಂಡರಿಗೆ ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ನರೇಂದ್ರ ಮೋದಿ ಅವರ ಬಿಜೆಪಿಗೆ ಮತ ನೀಡಬೇಡಿ ಎಂಬುದಾಗಿ ಚಾಮರಾಜನಗರ (Chamarajanagar) ತಾಲೂಕಿನ ನಂಜದೇವನಪುರದಲ್ಲಿ ರೈತ ಮುಖಂಡರು ಕರಪತ್ರ ಚಳವಳಿ ಕೈಗೊಂಡಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನರೇಂದ್ರ ಮೋದಿ ಅವರಿಗೆ ಮತ ನೀಡಬೇಡಿ ಎಂಬುದಾಗಿ ಹೇಳಲು ನೀವ್ಯಾರು” ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹಲವೆಡೆ ರೈತ ಮುಖಂಡರು ನರೇಂದ್ರ ಮೋದಿ ವಿರುದ್ಧ ಕರಪತ್ರ ಚಳವಳಿ ಆರಂಭಿಸಿದ್ದಾರೆ. ಪ್ರತಿಯೊಂದು ಗ್ರಾಮಕ್ಕೂ ತೆರಳುವ ರೈತ ಮುಖಂಡರು, ಮೋದಿಗೆ ಮತ ನೀಡಬೇಡಿ ಎಂಬುದಾಗಿ ಜನರಿಗೆ ಕರೆ ನೀಡುತ್ತಿದ್ದಾರೆ. ಅದೇ ರೀತಿ, ನಂಜದೇವನಪುರದಲ್ಲಿ ಕರಪತ್ರ ಚಳವಳಿ ಕೈಗೊಂಡಾಗ ಎಲ್ಲವೂ ಉಲ್ಟಾ ಆಯಿತು. “ನೀವು ರೈತ ಸಂಘದವರು. ರೈತರ ಬಗ್ಗೆ ಮಾತನಾಡಿ, ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತಿ. ಅದಕ್ಕೆ ನಾವೂ ಬೆಂಬಲ ನೀಡುತ್ತೇವೆ. ಅದು ಬಿಟ್ಟು, ಮೋದಿಗೆ ಮತ ಹಾಕಬೇಡಿ ಎನ್ನಲು ನೀವ್ಯಾರು” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

“ನರೇಂದ್ರ ಮೋದಿ ಅವರಿಗೆ ಮತ ಹಾಕದಿದ್ದರೆ ದೇಶ ಅಲ್ಲೋಲ-ಕಲ್ಲೋಲ ಆಗುತ್ತದೆ. ಬೇರೆ ದೇಶದವರು ನಮ್ಮ ಮೇಲೆ ದಾಳಿ ಮಾಡಿದಾಗ ನಿಮಗೆ ಗೊತ್ತಾಗುತ್ತದೆ. ನೀವು ಲಿಂಗಾಯತರು ಎನ್ನುತ್ತೀರಿ. ರೈತ ಸಂಘದವರು ಎಂದು ಹೇಳುತ್ತೀರಿ. ಆದರೆ, ನೀವೇಕೆ ನರೇಂದ್ರ ಮೋದಿ ವಿರುದ್ಧ ಪ್ರಚಾರ ಮಾಡುತ್ತಿದ್ದೀರಿ? ಇದು ಲಿಂಗಾಯತರು ಮಾಡುವ ಕೆಲಸವಲ್ಲ. ನಮ್ಮ ಮತ, ನಮಗೆ ಇಷ್ಟಬಂದವರಿಗೆ ಹಾಕುತ್ತೇವೆ” ಎಂಬುದಾಗಿ ಗ್ರಾಮಸ್ಥರು ರೈತ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮದಲ್ಲಿ ಕರಪತ್ರ ಹಂಚಲು ಅವಕಾಶ ಕೊಡದೆ ವಾಪಸ್‌ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದೆ. ಬುಧವಾರ (ಏಪ್ರಿಲ್‌ 24) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ದೇಶಾದ್ಯಂತ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್‌ 1ರಂದು ಚುನಾವಣೆ ಮುಗಿಯಲಿದೆ. ಜೂನ್‌ 4ರಂದು ಮತಎಣಿಕೆ ನಡೆಯಲಿದೆ.

ಇದನ್ನೂ ಓದಿ: ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ; ಮತ್ತೆ ಸಂಪತ್ತು ಹಂಚಿಕೆ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

Exit mobile version