Site icon Vistara News

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

CM Siddaramaiah

Lok Sabha Election: INDIA Bloc May Not Get Absolute Majority, Says CM Siddaramaiah

ಬೆಂಗಳೂರು: ಕರ್ನಾಟಕ (Karnataka) ಸೇರಿ ದೇಶಾದ್ಯಂತ ಲೋಕಸಭೆ ಚುನಾವಣೆ (Lok Sabha Election 2024) ಕಾವು ಬೇಸಿಗೆಯ ಬಿಸಿಲಿಗಿಂತ ಜಾಸ್ತಿ ಇದೆ. ಕರ್ನಾಟಕದಲ್ಲಂತೂ ಚುನಾವಣೆಯ ಭರಾಟೆ ದಿನೇದಿನೆ ಜಾಸ್ತಿಯಾಗುತ್ತಲೇ ಇದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, “ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ (India Bloc) ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಡಿಮೆ” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಸಿದ್ದರಾಮಯ್ಯ ಅವರು ಹೀಗೆ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. “ಲೋಕಸಭೆ ಚುನಾವಣೆ ವೇಳೆ ಇಂಡಿಯಾ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಸಿಗುವುದು ಕಷ್ಟಸಾಧ್ಯ. ಹಾಗಂತ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಇಂಡಿಯಾ ಒಕ್ಕೂಟವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಒಡಿಶಾದ ನವೀನ್‌ ಪಟ್ನಾಯಕ್‌ ಸೇರಿ ಹಲವು ರಾಜ್ಯಗಳ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುತ್ತದೆ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ದೇಶದಲ್ಲಿ ಬಿಜೆಪಿಯು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಅವರು ಕೂಡ ಎನ್‌ಡಿಎ ಎಂಬ ಮೈತ್ರಿಕೂಟವನ್ನು ರಚಿಸಿಯೇ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಗಳಿಸುವ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯೊಂದೇ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲು ಸಾಧ್ಯವೇ ಇಲ್ಲ” ಎಂದಿದ್ದಾರೆ.

ಸಿದ್ದು-ಶ್ರೀನಿವಾಸ ಪ್ರಸಾದ್‌ ಭೇಟಿ

ಪ್ರಚಾರದ ಮಧ್ಯೆಯೇ ಸಿದ್ದರಾಮಯ್ಯ ಅವರು ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಿ ಕೆಲ ಹೊತ್ತು ಚರ್ಚಿಸಿದರು. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್‌ ಅವರು ದೂರವೇ ಉಳಿದಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಅಲೆ ಇದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು, ಶ್ರೀನಿವಾಸ ಪ್ರಸಾದ್‌ ಅವರು ಬಹುಕಾಲದ ಗೆಳೆಯರು. ರಾಜಕೀಯ ನಿವೃತ್ತಿ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾದೆ ಅಷ್ಟೆ. ಇದು ರಾಜಕೀಯದ ಭೇಟಿ ಅಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Exit mobile version