Site icon Vistara News

Lokayukta Case: ಮೇಲಧಿಕಾರಿಯಿಂದ ಕಿರುಕುಳ ಆರೋಪ; ಲೋಕಾಯುಕ್ತ ಮೆಟ್ಟಿಲೇರಿದ ಕಿರಿಯ ಅಧಿಕಾರಿ

Lokayukta case Allegations of harassment by superior Junior officer moves Lokayukta

ಬೆಂಗಳೂರು: ತಮ್ಮ ಮೇಲಧಿಕಾರಿಯೊಬ್ಬರು ನನಗೆ ಕಿರುಕುಳ (Harassment by superiors) ನೀಡುತ್ತಿದ್ದಾರೆಂದು ಕಿರಿಯ ಅಧಿಕಾರಿಯೊಬ್ಬರು ಲೊಕಾಯುಕ್ತ ಕಚೇರಿಯಲ್ಲಿ ದೂರು (Lokayukta Case) ದಾಖಲಿಸಿರುವ ಘಟನೆ ಖಜಾನೆ ಆಯುಕ್ತಾಲಯದಲ್ಲಿ ನಡೆದಿದೆ.

ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್‌ ರಬ್‌ ಎಂಬುವವರು ಆಯುಕ್ತರಾದ ಅರುಂಧತಿ ಚಂದ್ರಶೇಖರ್‌ ಹಾಗೂ ಅಪರ ನಿರ್ದೇಶಕರಾದ ನಾಗಲಕ್ಷ್ಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ನೂತನ ಆಯುಕ್ತರಾದ ಅರುಂಧತಿ ಚಂದ್ರಶೇಖರ್‌ ರವರು ಅಬ್ದುಲ್‌ ರಬ್‌ ಅವರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಆರೋಪಿಸಿ ನೋಟಿಸ್‌ ನೀಡಿದ್ದರು.

ಸ್ವತಃ ಲೋಕೋಪಯೋಗಿ ಇಲಾಖೆಯೇ ಆರ್ಥಿಕ ನಷ್ಟ ಆಗಿಲ್ಲ ಎಂದು ದೃಢೀಕರಣ ಪತ್ರ ಬರೆದಿದ್ದರೂ ಇಬ್ಬರೂ ಮೇಲಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅಬ್ದುಲ್‌ ರಬ್‌, ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ತೊಂದರೆ ನೀಡಿದ್ದಾರೆಂದು ಲೋಕಾಯುಕ್ತ ಠಾಣೆಯಲ್ಲಿ ದಾಖಲೆಗಳ ಸಮೇತ ದೂರು ದಾಖಲಿಸಿದ್ದಾರೆ.

ಸದ್ಯಕ್ಕೆ ಖಜಾನೆ ಆಯುಕ್ತಾಲಯದಿಂದ ವರ್ಗಾವಣೆಯಾಗಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಅಬ್ದುಲ್‌ ರಬ್‌, ಅವರು ಈ ಕಾರ್ಯಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಕಾರ್ಯ ಹಂಚಿಕೆ ಆಗಿರುವುದಿಲ್ಲ ಹಾಗೂ ಅಂದಾಜು ವೆಚ್ಚದಲ್ಲೇ ಕಾಮಗಾರಿ ಮುಗಿಸಲಾಗಿದೆ. ಆದರೂ ಕಿರುಕುಳ ನೀಡುವ ಉದ್ದೇಶದಿಂದ ಈ ಇಬ್ಬರು ಮೇಲಧಿಕಾರಿಗಳು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ದೂರಿದ್ದಾರೆ.

ಎಂಜಿನಿಯರ್‌ಗಳ ಮೇಲೆ ಒತ್ತಡ?

ಜತೆಗೆ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳನ್ನು ಸಂಪರ್ಕಿಸಿರುವ ನಾಗಲಕ್ಷ್ಮಿ ಮತ್ತು ಆರುಂಧತಿ ಚಂದ್ರಶೇಖರ್‌ ಅಬ್ದುಲ್‌ ರಬ್‌ ಅವರ ಮೇಲೆ ತಪ್ಪು ಹೊರಿಸಿ ಬರೆದಿರುವ ಮಾದರಿ ಪತ್ರವನ್ನು ರಚಿಸಿ, ಇದೇ ರೀತಿಯ ಪತ್ರವನ್ನು ಬರೆದು ಸಹಿ ಹಾಕಬೇಕೆಂದು ಒತ್ತಡ ಹೇರಿದ್ದಾರೆಂದು ಹೇಳಲಾಗಿದೆ.

ಇದನ್ನೂ ಓದಿ: BJP Karnataka: ಮಂಡ್ಯ ಟಿಕೆಟ್ ಬಗ್ಗೆ ಶೀಘ್ರ ತೀರ್ಮಾನ; ಸುಮಲತಾ ಜತೆ ಮಾತನಾಡುವೆನೆಂದ ವಿಜಯೇಂದ್ರ

ಶೀಘ್ರದಲ್ಲಿ ಸರ್ಕಾರಕ್ಕೆ ವರದಿ

ಬೇರೆ ಇಲಾಖೆಗೆ ವರ್ಗವಾಗಿದ್ದರೂ ಸಹ ಈ ರೀತಿ ಸುಳ್ಳು ಆರೋಪ ಮಾಡುತ್ತಿರುವುದರ ಹಿಂದೆ ನನ್ನ ವೃತ್ತಿ ಜೀವನಕ್ಕೆ ಕಳಂಕ ಮೆತ್ತುವ ಉದ್ದೇಶವಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹೇಳಿಕೊಂಡಿರುವ ಅಬ್ದುಲ್‌ ರಬ್ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತರವರಿಂದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ವರದಿಯನ್ನು ಸರ್ಕಾರದ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

Exit mobile version