ದಾವಣಗೆರೆ: ಪೋಕ್ಸೋ ಪ್ರಕರಣದ (POCSO Case) ಆರೋಪಿಗೆ ಅನುಕೂಲ ಮಾಡಿಕೊಡಲು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಪ್ರಕರಣವು ದಾವಣಗೆರೆ ನಗರದಲ್ಲಿ ನಡೆದಿದೆ.
ದಾವಣಗೆರೆ ಪೋಕ್ಸೋ ವಿಶೇಷ ನ್ಯಾಯಾಲಯದ ಸರ್ಕಾರಿ ವಿಶೇಷ ಅಭಿಯೋಜಕಿ ರೇಖಾ ಕೊಟ್ರೇಗೌಡರ್ ಪೋಕ್ಸೋ ಪ್ರಕರಣದ ಆರೋಪಿ ಮದನ್ ಎಂಬಾತನಿಗೆ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ಸಂತ್ರಸ್ತೆ ಪರ ನಿಲ್ಲಬೇಕಿದ್ದ ಸರ್ಕಾರಿ ವಕೀಲೆ, ಆರೋಪಿ ಪರ ಕೈಜೋಡಿಸಿರುವ ಆರೋಪ ಕೇಳಿಬಂದಿದೆ.
ಆರೋಪಿ ಸಹ ಲಂಚ ನೀಡಲು ಒಪ್ಪಿದ್ದ ಎನ್ನಲಾಗಿದ್ದು, ಇದರ ಭಾಗವಾಗಿ ಮೊದಲೇ ೧೩ ಸಾವಿರ ರೂಪಾಯಿಯನ್ನು ಕೊಟ್ಟಿದ್ದ. ಬಳಿಕ ರೇಖಾ 87 ಸಾವಿರ ರೂಪಾಯಿ ನಗದು ರೂಪದಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಸಂತ್ರಸ್ತೆ ಪರ ವಾದ ಮಾಡಬೇಕಿದ್ದ ಸರ್ಕಾರಿ ವಕೀಲೆಯೊಬ್ಬರು ಆರೋಪಿಗೆ ಸಹಕಾರ ಮಾಡುವ ಉದ್ದೇಶದಿಂದ ಈಗಾಗಲೇ 13 ಸಾವಿರ ರೂಪಾಯಿ ಲಂಚ ಪಡೆದಿದ್ದರು ಎಂದು ದೂರುದಾರ ಮದನ್ ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Actor Yash: ಅಪ್ಪನಿಗೇ ಬೈಸೆಪ್ಸ್ ತೋರಿಸಿ ಆ್ಯಟಿಟ್ಯೂಡ್ ಪ್ರದರ್ಶಿಸಿದ ಯಶ್ ಪುತ್ರ, ಚೋಟಾ ರಾಕಿ ಭಾಯ್ ಎಂದ ಜನ
ಸರ್ಕಾರಿ ಅಭಿಯೋಜಕಿ ದಾವಣಗೆರೆ ನಗರದ ಪಿಜೆ ಬಡಾವಣೆಯ ತಮ್ಮ ನಿವಾಸದಲ್ಲಿ 87 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿದೆ. ಆರೋಪಿ ರೇಖಾ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.