ಬೆಂಗಳೂರು/ದಾವಣಗೆರೆ: 2013ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಕಾರಣವಾದ ಪ್ರಮುಖಾಂಶಗಳಲ್ಲಿ ಭ್ರಷ್ಟಾಚಾರವೂ (Lokayukta raid) ಒಂದು. ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರ ಮೇಲಿನ ಭ್ರಷ್ಟಾಚಾರ ಆರೋಪಗಳ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟ ಗೆಲುವನ್ನು ತಂದುಕೊಟ್ಟಿತ್ತು. ಇದೀಗ 2023ರಲ್ಲಿ ಮತ್ತೆ ಕಾಂಗ್ರೆಸ್ ಕೈಗೆ ಅದೇ ಅಸ್ತ್ರ ಸಿಕ್ಕಿದೆ.
ಈಗಾಗಲೇ 40% ಕಮಿಷನ್, ಪೇ ಸಿಎಂ, ಪೇ ಎಂಎಲ್‌ಎ ಹೋರಾಟಗಳ ಮೂಲಕ ಜನರ ನಡುವೆ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್‌ಗೆ ಈಗ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಸುತ್ತ ಆವರಿಸಿರುವ ಲೋಕಾಯುಕ್ತ ಬಲೆ ಒಂದು ಬ್ರಹ್ಮಾಸ್ತ್ರವಾಗಿ ಒದಗಿಬಂದಿದೆ.
ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪಾಲಿಗೆ ಇದೊಂದು ಭಾರಿ ಮುಜುಗರದ ಸಂಗತಿಯಾದರೆ ಕಾಂಗ್ರೆಸ್‌ಗೆ ತಾನು ಮಾಡುತ್ತಿರುವ ಆರೋಪಗಳಿಗೆ ಅಧಿಕೃತ ದಾಖಲೆ ಸಿಕ್ಕಿದಂತಾಗಿದೆ. ಕಾಂಗ್ರೆಸ್ ಈಗಾಗಲೇ 40% ಕಮಿಷನ್ ಹಗರಣವನ್ನು ಪದೇಪದೆ ಪ್ರಸ್ತಾಪಿಸುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಇದು ಹಿಂಡ್ ಎಂಡ್ ರನ್ ಕೇಸ್, ದಾಖಲೆ ಕೊಡಿ ಎಂದು ಕೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಮಾಡಾಳ್ ವಿರೂಪಾಕ್ಷಪ್ಪನ ಮಗನ ಕೇಸು ಒಂದು ಅಧಿಕೃತ ದಾಖಲೆಯಾಗಿ ಕಾಂಗ್ರೆಸ್‌ಗೂ ಸರಕಾರಕ್ಕೂ ಸಿಕ್ಕಿದಂತಾಗಿದೆ.
2013ಕ್ಕೂ ಮೊದಲು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಗದೀಶ್ ಕಟ್ಟಾ, ಜನಾರ್ದನ ರೆಡ್ಡಿ, ಯಡಿಯೂರಪ್ಪ ಜೈಲು ಸೇರಿದ್ದು ಅಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. 2013ರ ಚುನಾವಣೆಯಲ್ಲಿ ಭ್ರಷ್ಟಾಚಾರದ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಸಕ್ಸಸ್ ಆಗಿತ್ತು ಕಾಂಗ್ರೆಸ್. ಹಾಗಿರುವಾಗ ಈ ಬಾರಿ ಬಿಜೆಪಿ ನಾಯಕರೇ ಅಸ್ತ್ರಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ತಂದುಕೊಡುತ್ತಿರುವುದರಿಂದ ಕಾಂಗ್ರೆಸ್ ಅದನ್ನು ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ.
ಶುಕ್ರವಾರದಿಂದಲೇ ಪ್ರತಿಭಟನೆ
ಕಾಂಗ್ರೆಸ್ ಗುರುವಾರ ರಾತ್ರಿಯಿಂದಲೇ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದು, ನಾಯಕರು ಹೇಳಿಕೆಗಳ ಮೂಲಕ ಬಿಜೆಪಿಯನ್ನು ತಿವಿಯಲು ಆರಂಭಿಸಿದ್ದಾರೆ. ಶುಕ್ರವಾರ ರಾಜ್ಯದ ನಾನಾ ಕಡೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಚನ್ನಗಿರಿ ತಾಲೂಕು ಕಚೇರಿಯ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದ್ದು, ಅದರಲ್ಲಿ ವಿರೂಪಾಕ್ಷಪ್ಪ ಮಾಡಾಳು ಅವರನ್ನು ಶಾಸಕ ಸ್ಥಾನದಿಂದ ಕಿತ್ತು ಹಾಕುವಂತೆ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯಲು ಸಿದ್ಧರಾಗಿದ್ದಾರೆ.
ಬೆಂಗಳೂರಿಗೆ ತೆರಳಿದ ಶಾಸಕ ಮಾಡಾಳ್
ಲೋಕಾಯುಕ್ತ ದಾಳಿ ಬೆನ್ನಲ್ಲೇ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಕೆಲ ದಾಖಲೆಗಳೊಂದಿಗೆ ಪುತ್ರ ಮಲ್ಲಿಕಾರ್ಜುನ ಜೊತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಚನ್ನಗಿರಿ ತಾಲೂಕಿನ ಚನ್ನೇಶ್ ಪುರದ ಮಾಡಾಳ್ ವಿರೂಪಾಕ್ಷಪ್ಪ ಮನೆ ಖಾಲಿ ಖಾಲಿಯಾಗಿದೆ. ಶಾಸಕರ ಮನೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : ಲೋಕಾಯುಕ್ತ ಇರೋದೇ ಭ್ರಷ್ಟಾಚಾರ ತಡೆಯೋಕೆ; ಬಿಜೆಪಿ ಶಾಸಕನ ಪುತ್ರನ ಲಂಚ ಹಗರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ