Site icon Vistara News

Lokayukta Raid: ಮತ್ತಷ್ಟು ಅಧಿಕಾರಿಗಳಿಗೆ ಲೋಕಾ ದಾಳಿ ಶಾಕ್‌, ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲಿ ಆಮೆ ಪತ್ತೆ!

tortoise found while loka raid

ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತಂಡಗಳ ದಾಳಿ (Lokayukta Raid) ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಕೃಷಿ ಇಲಾಖೆ ಅಧಿಕಾರಿಯೊಬ್ಬರ ಮನೆಯಲ್ಲಿ ಆಮೆಗಳು ಪತ್ತೆಯಾಗಿವೆ.

ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮನೆಯಲ್ಲಿ ಎರಡು ಆಮೆಗಳು ಪತ್ತೆಯಾದವು. ನೀರಾಮೆಗಳ ಪತ್ತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಗುಂಡು ಸಿಂಗ್ ಹಾಗೂ ಡೆಪ್ಯೂಟಿ ಅರಣ್ಯ ಅಧಿಕಾರಿ ಸುರೇಶ ಸಂಕನಗೌಡರ್ ಸ್ಥಳಕ್ಕೆ ಆಗಮಿಸಿ ಆಮೆಗಳನ್ನು ಪರಿಶೀಲಿಸಿದರು. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಚೇತನಾ ಪಾಟೀಲ್ ಮನೆಯಲ್ಲಿನ ದಾಖಲೆಗಳ ಕ್ರೋಡೀಕರಣ ಕಾರ್ಯದಲ್ಲಿ ತೊಡಗಿರುವ ಲೋಕಾ ಅಧಿಕಾರಿಗಳು ಎರಡು ಲಾಕರ್ ಇರುವ ಬಗ್ಗೆ ಮಾಹಿತಿ ಪಡೆದಿದ್ದು, ಅವುಗಳನ್ನು ಒಪನ್ ಮಾಡಲು ಮುಂದಾಗಿದ್ದಾರೆ.

ತುಮಕೂರು: ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಹೆಚ್. ರವಿ ಮನೆ ಮೇಲೆ ದಾಳಿ ನಡೆಸಲಾಗಿದೆ. ತುಮಕೂರಿನ ಆರ್.ಟಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೆ.ಹೆಚ್.ರವಿ, ಕಾಂಗ್ರೆಸ್ ಮುಖಂಡ ಜಿ.ಜೆ.ರಾಜಣ್ಣ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬೆಳಗ್ಗೆ 6 ಗಂಟೆಯಿಂದ ಮನೆ ಪರಿಶೀಲನೆಯನ್ನು ಮೂರು ಕಾರುಗಳಲ್ಲಿ ಬಂದಿರುವ 8 ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿದ್ದಾರೆ.

ತುಮಕೂರಿನ ಶಿರಾ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಎಇ ಆಗಿರುವ ಪುಟ್ಟರಾಜು ಅವರ ಅಶೋಕ ನಗರದ 9ನೇ ಕ್ರಾಸ್‌ನಲ್ಲಿರುವ ಮನೆ ಮೇಲೆ ಹಾಗೂ ಯಲ್ಲಾಪುರದಲ್ಲಿರುವ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅವರು ಭದ್ರಾವತಿಯಿಂದ ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.

ಕಲಬುರಗಿ: ಕಲಬುರಗಿಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ, ಸದ್ಯ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶರಣಪ್ಪ ಮಡಿವಾಳ್ ಅವರ ಮನೆ ಹಾಗೂ ಫಾರಂ ಹೌಸ್‌ ಮೇಲೆ ದಾಳಿ ನಡೆದಿದೆ. ಕಲಬುರಗಿ ತಾಲೂಕಿನ ಖಣದಾಳ್ ಬಳಿ ಕೋಟ್ಯಂತರ ಬೆಲೆಬಾಳುವ ಹನ್ನೊಂದು ಎಕರೆ ಫಾರ್ಮ್ ಹೌಸ್ ಹೊಂದಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮುನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಶರಣಪ್ಪ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Lokayukta Raid: ರಾಜ್ಯಾದ್ಯಂತ ಅಧಿಕಾರಿಗಳಿಗೆ ಮುಂಜಾನೆ ಶಾಕ್‌, ಹಲವೆಡೆ ಲೋಕಾಯುಕ್ತ ದಾಳಿ

Exit mobile version