ದಾವಣಗೆರೆ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಮನೆಯ ಮೇಲೆ ಲೋಕಾಯುಕ್ತ ರೈಡ್ (Lokayukta raid) ಹಾಗೂ ಕೋಟಿಗಟ್ಟಲೆ ಹಣ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ವರ್ಚಸ್ಸಿಗೆ ತೀರಾ ಹಾನಿಯಾಗಿದೆ. ಚುನಾವಣೆಗೆ ಮುನ್ನ ಇಂಥದೊಂದು ಮುಖಭಂಗ ಎದುರಿಸಲು ಪಕ್ಷ ಸಿದ್ಧವಿಲ್ಲದಿರುವುದರಿಂದ, ಶಾಸಕರ ರಾಜೀನಾಮೆ ಪಡೆಯಲು ಪಕ್ಷ ಮುಂದಾಗಿದೆ.
ಕನಿಷ್ಠ ಪಕ್ಷ ಶಾಸಕರ ರಾಜೀನಾಮೆಯಿಂದಲಾದರೂ ಈಗ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಮುಂದಾಗಿದೆ. ಈಗಾಗಲೇ KSDL ಅಧ್ಯಕ್ಷ ಸ್ಥಾನಕ್ಕೆ ಶಾಸಕ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿದೆ.
ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಬಿಗಿ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಮಾಡಾಳು ಅವರಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಬಾಯಿಗೆ ಬೀಗ ಹಾಕಲು ಬಿಜೆಪಿ ಯತ್ನಿಸಿದೆ. ನಮ್ಮದು ಭ್ರಷ್ಟಾಚಾರ ವಿರೋಧಿ ಸರ್ಕಾರ ಅಂತ ಬಿಂಬಿಸಿಕೊಳ್ಳಲು ಮುಂದಾಗಿದೆ.
ಚುನಾವಣೆ ಹೊಸ್ತಿಲಲ್ಲಿ ಈ ಲೋಕಾಯುಕ್ತ ರೈಡ್ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಇದೇ ತಿಂಗಳಲ್ಲಿ ಮತ್ತೆ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ ತಿಂಗಳ 12ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದಾವಣಗೆರೆ ಜಿಲ್ಲೆ ಹೊನ್ನಾಳಿಗೆ ಆಗಮಿಸಲಿದ್ದಾರೆ. 25ರಂದು ದಾವಣಗೆರೆಯಲ್ಲಿ ಮೋದಿ ಕಾರ್ಯಕ್ರಮ ಆಯೋಜನೆಯಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಚುನಾವಣೆಗೆ ಪಾಂಚಜನ್ಯ ಮೊಳಗಿಸಲು ಬಿಜೆಪಿ ಸಜ್ಜಾಗಿದೆ. ಇಂಥ ಹೊತ್ತಿನಲ್ಲಿ, ಮಧ್ಯ ಕರ್ನಾಟಕದಿಂದ ಚುನಾವಣಾ ರಣಕಹಳೆ ಮೊಳಗುವಿಕೆಗೆ ವಿರೂಪಾಕ್ಷಪ್ಪ ಪ್ರಕರಣ ಅಡ್ಡಿಯಾಗಿದೆ. ಕೇಂದ್ರದ ನಾಯಕರು ಬರುವುದಕ್ಕಿಂತ ಮೊದಲೇ ಡ್ಯಾಮೇಜ್ ಕಂಟ್ರೋಲ್‌ಗೆ ಪಕ್ಷ ನಿರ್ಧರಿಸಿದೆ.
ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ