ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಪ್ರಶಾಂತ್ ಕಚೇರಿ ಮೇಲಿನ ಲೋಕಾಯುಕ್ತ ದಾಳಿ (Lokayukta Raid) ಅಂತ್ಯವಾಗಿದೆ. ಗುರುವಾರ ಸಂಜೆ 6.30ಕ್ಕೆ ಶುರುವಾದ ದಾಳಿ, ಸತತ 18 ಗಂಟೆಗಳ ಪರಿಶೀಲನೆ ಮೂಲಕ ಮುಗಿದಿದೆ. ದಾಳಿ ವೇಳೆ ಶಾಸಕರ ಪುತ್ರನ ಬೆಡ್ ರೂಮಿನಲ್ಲಿ ಮೂಟೆಗಟ್ಟಲೆ ನೋಟುಗಳು ಪತ್ತೆ ಆಗಿದ್ದು, ಎಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಸಕರ ಪುತ್ರನ ನಿವಾಸದಲ್ಲಿ ದಾಖಲೆಗಳು ಇಲ್ಲದ ಸುಮಾರು 6.2 ಕೋಟಿ ರೂ. ನಗದು ಪತ್ತೆ ಆಗಿದೆ. 10 ಕೆ.ಜಿ ತೂಕದ ಗುಟ್ಕಾ ಬ್ಯಾಗ್‌ಗಳಲ್ಲಿ 500 ಹಾಗೂ 2000 ಮುಖ ಬೆಲೆಯ ನೋಟುಗಳ ಕಂತೆಯನ್ನು ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸಿದ್ದ ಬ್ಯಾಗ್‌ಗಳು ಪತ್ತೆ ಆಗಿದೆ.
ಕಂತೆ ಕಂತೆ ಹಣವನ್ನು 8 ಗುಟ್ಕಾ ಬ್ಯಾಗ್‌ಗಳಲ್ಲಿ ತುಂಬಿಸಿಕೊಂಡು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಒಂದು ಕಾರಿನಲ್ಲಿ ಗರಿ ಗರಿ ನೋಟು ಮತ್ತೊಂದು ವಾಹನದಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈವರೆಗಿನ ಶೋಧ ಕಾರ್ಯಾಚರಣೆಯಲ್ಲಿ 8ಕೋಟಿ12 ಲಕ್ಷ ಪತ್ತೆ ಆಗಿದೆ.
ಕೆ.ಜಿ ಗಟ್ಟಲೆ ಚಿನ್ನಾಭರಣ ಪತ್ತೆ
ಮಾಡಾಳು ಪ್ರಶಾಂತ್ ಮನೆಯಲ್ಲಿ ಮೂಟೆಗಟ್ಟಲೆ ಹಣ ಮಾತ್ರವಲ್ಲದೆ, ಬದಲಿಗೆ ಕೆ.ಜಿ ಗಟ್ಟಲೆ ಚಿನ್ನಾಭರಣ ಸಿಕ್ಕ ಹಿನ್ನೆಲೆ ಲೋಕಾಯಕ್ತ ಅಧಿಕಾರಿಗಳು ಅಕ್ಕಸಾಲಿಗರನ್ನು ಕರೆಸಿಕೊಂಡು, ಮನೆಯಲ್ಲಿದ್ದ ಬಂಗಾರವನ್ನು ತೂಕ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಮತ್ತು ಆಸ್ತಿಪತ್ರಗಳು ದೊರೆತಿದ್ದು ಎಷ್ಟೆಷ್ಟು ಸಿಕ್ಕಿದೆ ಎಂಬುದರ ಮಾಹಿತಿ ನಿಖರವಾಗಿ ಲಭ್ಯವಾಗಿಲ್ಲ.
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?
BWSSBಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಆಗಿರುವ ಮಾಡಳ್ ಪ್ರಶಾಂತ್ ಗುರುವಾರ ಸಂಜೆ 6.30ರ ಸುಮಾರಿಗೆ ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳ ಬಳಿ ಲಾಕ್ ಆಗಿದ್ದರು. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಟೆಂಡರ್ ಕೊಡಿಸುವ ವಿಚಾರಕ್ಕೆ ಗುತ್ತಿಗೆದಾರನ ಬಳಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 40 ಲಕ್ಷ ರೂ. ಸ್ವೀಕರಿಸುವಾಗಲೇ ಲೋಕಾಯುಕ್ತ ಟೀಂ ದಾಳಿ ಮಾಡಿತ್ತು.
ಇದನ್ನೂ ಓದಿ: ಲೋಕಾಯುಕ್ತ ಇರೋದೇ ಭ್ರಷ್ಟಾಚಾರ ತಡೆಯೋಕೆ; ಬಿಜೆಪಿ ಶಾಸಕನ ಪುತ್ರನ ಲಂಚ ಹಗರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು ಮೂಲದ ಗುತ್ತಿಗೆದಾರ ಶ್ರೇಯಸ್ ಕಶ್ಯಪ್ ಎಂಬುವವರಿಗೆ ಕೆಎಸ್‌ಡಿಎಲ್ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಮಾಡಾಳ್ ಪ್ರಶಾಂತ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಶ್ರೇಯಸ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕಚೇರಿ ಮೇಲೆ ದಾಳಿ ಮಾಡಿದಾಗ 3 ಬ್ಯಾಗ್‌ಗಳಲ್ಲಿ 2,000 ಮತ್ತು 500 ರೂಪಾಯಿ ಗರಿ ಗರಿ ನೋಟುಗಳು ಪತ್ತೆ ಆಗಿವೆ. ಶೋಧಕಾರ್ಯಕ್ಕೆ ಇಳಿದ ಅಧಿಕಾರಿಗಳು ಕಚೇರಿ ಮಾತ್ರವಲ್ಲದೇ ಸಂಜಯ್‌ನಗರದ ಬಳಿ ಇರುವ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಈ ವೇಳೆ ದಾಖಲೆಯಿಲ್ಲದೆ 6ಕೋಟಿ ರೂ. ಗೂ ಹೆಚ್ಚು ಅನಧಿಕೃತ ಹಣ ಪತ್ತೆ ಆಗಿದೆ.
ಬೆಡ್ ರೂಂನಲ್ಲಿದ್ದ ಕಂತೆಕಂತೆ ಹಣ ಎಣಿಸಿದ ಅಧಿಕಾರಿಗಳು
ಬೆಂಗಳೂರು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ